ಸಂಕಷ್ಟಕ್ಕೆ ಸಿಲುಕಿರುವ ಅದಾನಿ ಸಮೂಹ: 34,900 ಕೋಟಿ ರೂ. ಪೆಟ್ರೋಕೆಮಿಕಲ್ ಯೋಜನೆಗೆ ತಿಲಾಂಜಲಿ
ನವದೆಹಲಿ: ಹಿಂಡನ್‌ಬರ್ಗ್ ರೀಸರ್ಚ್ ವರದಿಯ ಹಿನ್ನೆಲೆಯಲ್ಲಿ ಅದಾನಿ ಸಮೂಹ ಸಂಕಷ್ಟಕ್ಕೆ ಸಿಲುಕಿದೆ. ಆದ್ದರಿಂದ ಗುಜರಾತ್ ರಾಜ್ಯದ ಮುಂದ್ರಾದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ 34,900 ಕೋ. ರೂ. ಮೊತ್ತದ ಪೆಟ್ರೋಕೆಮಿಕಲ್ ಯೋಜನೆಯನ್ನು ಕೈಬಿಟ್ಟಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಈ ಯೋಜನೆಗಾಗಿ ಎಸ್‌ಬಿಐ ನೇತೃತ್ವದ ಏಳರಿಂದ ಎಂಟು ಬ್ಯಾಂಕ್‌ಗಳ ಸಮೂಹದಿಂದ 14,000 ಕೋಟಿ ರೂ. ಸಂಗ್ರಹ ಮಾಡಲು ಮಾತುಕತೆ ನಡೆಸಲಾಗುತ್ತಿತ್ತು. ಆದರೆ ಇದೀಗ ಹಣ ಸಂಗ್ರಹಿಸುವ ಯೋಜನೆಗೂ ತಿಲಾಂಜಲಿ ನೀಡಲಾಗಿದೆ. ಅದಾನಿ ಸಮೂಹದಿಂದ ನಡೆದಿದೆ ಎನ್ನಲಾದ ವಂಚನೆಗಳ ಬಗ್ಗೆ ಹಿಂಡನ್ ಬರ್ಗ್ ಪ್ರಕಟಿಸಿದ ವರದಿಯಿಂದ ಆಗಿರುವ ಹಿನ್ನಡೆಯಿಂದ ಚೇತರಿಸಿಕೊಳ್ಳಲು ಕಂಪನಿ ಪ್ರಯತ್ನಿಸುತ್ತಿದೆ. ಈ ನಡುವೆಯೇ ವಾರ್ಷಿಕ ದಶಲಕ್ಷ ಟನ್ ಹಸಿರು ಪಿವಿಸಿ ಯೋಜನೆಯ ಎಲ್ಲಾ ಚಟುವಟಿಕೆಗಳನ್ನು ತಕ್ಷಣದಿಂದಲೇ ನಿಲ್ಲಿಸುವಂತೆ ಸಂಬಂಧಪಟ್ಟ ಎಲ್ಲಾ ವರ್ತಕರು ಹಾಗೂ ಸರಬರಾಜು ದಾರರಿಗೆ ಅದಾನಿ ಗ್ರೂಪ್ ಇಮೇಲ್ ರವಾನಿಸಿದೆ.
ಭಾರತದಲ್ಲಿ ಪಿವಿಸಿ ವಾರ್ಷಿಕ ಬೇಡಿಕೆ 3.50 ದಶಲಕ್ಷ ಟನ್ ಆಗಿರುವ ಹಿನ್ನೆಲೆಯಲ್ಲಿ ಮುಂದ್ರಾ ಪೆಟ್ರೋಕೆಮಿಕಲ್ ಯೋಜನೆಯನ್ನು ಅದಾನಿ ಗ್ರೂಪ್ ರೂಪಿಸಿತ್ತು.