ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಸಂತ್ರಸ್ತ ಪುರುಷೋತ್ತಮ ಪೂಜಾರಿಗೆ ಆಟೋರಿಕ್ಷಾ, 5 ಲಕ್ಷ ಚೆಕ್ ಹಸ್ತಾಂತರ
Sunday, March 5, 2023
ಮಂಗಳೂರು: ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದಲ್ಲಿ ಗಾಯಾಳುವಾಗಿದ್ದ ಆಟೊರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿಗೆ ಹೊಸ ಆಟೋರಿಕ್ಷಾ ಹಾಗೂ 5 ಲಕ್ಷ ರೂಮ ಚೆಕ್ ಅನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಹಸ್ತಾಂತರಿಸಿದರು.
ನಗರದ ಉಜ್ಜೋಡಿಯಲ್ಲಿರುವ ಪುರುಷೋತ್ತಮ ಪೂಜಾರಿಯವರ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಆಟೋರಿಕ್ಷಾ ಹಾಗೂ 5 ಲಕ್ಷ ರೂ. ಚೆಕ್ ಅನ್ನು ಹಸ್ತಾಂತರಿಸಲಾಯಿತು. 2022ರ ನವೆಂಬರ್ 19 ರಂದು ನಗರದ ಗರೋಡಿಯಲ್ಲಿ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಪೋಟ ಸಂಭವಿಸಿತ್ತು. ಉಗ್ರ ಶಾರೀಕ್ ಕುಕ್ಕರ್ ಬಾಂಬ್ ಸ್ಪೋಟಿಸಲೆಂದು ರಿಕ್ಷಾದಲ್ಲಿ ಹೋಗುತ್ತಿದ್ದ ವೇಳೆ ಗರೋಡಿ ಬಳಿ ಸ್ಪೋಟಗೊಂಡಿತ್ತು. ಈ ಸ್ಪೋಟ ಪ್ರಕರಣದಲ್ಲಿ ಭಯೋತ್ಪಾದಕ ಶಾರೀಕ್ ಹಾಗೂ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಎರಡು ತಿಂಗಳ ಹಿಂದೆ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ಈ ಸಂದರ್ಭ ಅವರ ಮನೆಗೆ ಬಂದು ವೀಕ್ಷಿಸಿದ ಶಾಸಕ ವೇದವ್ಯಾಸ ಕಾಮತ್ ಅವರು ಪುರುಷೋತ್ತಮ ಪೂಜಾರಿ ಅವರಿಗೆ ತನ್ನ ವೈಯಕ್ತಿಕ ನಿಧಿಯಿಂದ ಹೊಸ ರಿಕ್ಷಾ ಮತ್ತು ಬಿಜೆಪಿ ಪಕ್ಷದ ವತಿಯಿಂದ 5 ಲಕ್ಷ ರೂ ಗಳನ್ನು ನೀಡುವುದಾಗಿ ಭರವಸೆ ನೀಡಿದ್ದರು.
ಅದರಂತೆ ಇಂದು ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ತಮ್ಮ ವೈಯಕ್ತಿಕ ನಿಧಿಯಿಂದ ಹೊಸ ರಿಕ್ಷಾ ಮತ್ತು ಬಿಜೆಪಿ ಪಕ್ಷದ ವತಿಯಿಂದ ನೀಡಿರುವ 5 ಲಕ್ಷ ರೂಗಳ ಚೆಕ್ ಅನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹಸ್ತಾಂತರಿಸಿದರು. ಈ ಸಂದರ್ಭ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ನಗರದ ಬಿಜೆಪಿ ನಾಯಕರುಗಳು, ವಿಹಿಂಪ ಮುಖಂಡ ಶರಣ್ ಪಂಪ್ ವೆಲ್, ಪುರುಷೊತ್ತಮ ಪೂಜಾರಿ ಕುಟುಂಬಿಕರು ಉಪಸ್ಥಿತರಿದ್ದರು.
ಈ ಬಳಿಕ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಕಳೆದ ಕೆಲ ವರ್ಷಗಳಿಂದ ನಡೆಯುತ್ತಿದೆ. ಇಸ್ಲಾಮಿಕ್ ರಾಷ್ಟ್ರ ಮಾಡಲು ದೊಡ್ಡ ಪ್ರಯತ್ನ ನಡೆಯುತ್ತಿದೆ. ಮೋದಿಯವರು ಪ್ರಧಾನಿಯಾದ ಬಳಿಕ ಅದನ್ನು ನಿಲ್ಲಿಸುವ ಕಾರ್ಯ ನಡೆಯುತ್ತಿದೆ. ಇಂದು ಭಯೋತ್ಪಾದನಾ ಚಟುವಟಿಕೆ ಕಡಿಮೆಯಾಗಿದೆ. ಆದರೆ ಅಲ್ಲೊಂದು ಇಲ್ಲೊಂದು ಭಯೋತ್ಪಾದನಾ ಕಾರ್ಯ ನಡೆಯುತ್ತಿದೆ. ಅದಕ್ಕಾಗಿಯೆ ಪಿಎಫ್ ಐ ಸಂಘಟನೆಯನ್ನು ನಿಷೇಧ ಮಾಡಲಾಗಿದೆ ಎಂದರು.
ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ ಇಸ್ಲಾಮಿಕ್ ರಾಷ್ಟ್ರ ಮಾಡುವ ಪ್ರಯತ್ನ ಎಂದು ಸಂಸ್ಥೆ ಹೇಳಿದೆ. ಅದಕ್ಕೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತದೆ. ಆದರೆ ಕಾಂಗ್ರೆಸ್ ಪಕ್ಷ ಇಂತಹ ಘಟನೆಗಳು ನಡೆದಾಗ ಅವರ ಪರ ನಿಲ್ಲುತ್ತದೆ. ಇದನ್ನು ನೋಡಿದಾಗ ಕಾಂಗ್ರೆಸ್ ಭಯೋತ್ಪಾದನಾ ಚಟುವಟಿಕೆಗಳಿಗೆ ಬೆಂಬಲ ಕೊಡುವ ಪಕ್ಷವೇ ಎಂದು ಅನಿಸುತ್ತದೆ. ಅವರು ಪುರುಷೋತ್ತಮ ಪೂಜಾರಿಯವರನ್ನು ಅಮಾಯಕ ಎನ್ನದೆ ಆರೋಪಿಯನ್ನು ಅಮಾಯಕ ಎಂದು ಹೇಳುತ್ತಿದೆ. ಇದಕ್ಕೆ ಉತ್ತರ ಎನ್ಐಎ ಕೊಟ್ಟಿದೆ. ಇದರ ಬಗ್ಗೆ ಕಾಂಗ್ರೆಸ್ ಪಕ್ಷ, ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ ಏನು ಹೇಳುತ್ತಾರೆ.
ಪ್ರಕರಣದಲ್ಲಿ ಉಡುಪಿಯ ಕಾಂಗ್ರೆಸ್ ಮುಖಂಡನ ಪುತ್ರನನ್ನು ಬಂಧಿಸಲಾಗಿದೆ. ಇವತ್ತಿನವರೆಗೆ ಆತನನ್ನು ಕಾಂಗ್ರೆಸ್ ಪಕ್ಷ ಉಚ್ಚಾಟಿಸಿಲ್ಲ. ಭಯೋತ್ಪಾದಕರು ಕಾಂಗ್ರೆಸ್ ನಲ್ಲಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಈ ದೇಶದಲ್ಲಿ ತುಷ್ಟಿಕರಣದ ನೀತಿಯಿಂದಾಗಿ ಇಂತಹ ಚಟುವಟಿಕೆ ಜಾಸ್ತಿಯಾಗಿದೆ. ಕಾಂಗ್ರೆಸ್ ಮತಬ್ಯಾಂಕ್ ಆಶಯದಲ್ಲಿ ಕಾಂಗ್ರೆಸ್ ಮಾಡಿದ ತುಷ್ಟಿಕರಣ ನೀತಿಯಿಂದ ಭಯೋತ್ಪಾದನಾ ಚಟುವಟಿಕೆ ಜಾಸ್ತಿಯಾಗಿದೆ. ನಮ್ಮ ಸರಕಾರ ಕಟ್ಟುನಿಟ್ಟಿನ ಕ್ರಮದ ಮೂಲಕ ಇವುಗಳನ್ನು ನಿಯಂತ್ರಣ ಮಾಡಲಿದೆ ಎಂದರು.