
ಮಂಗಳೂರು: ಐಸ್ ಕ್ರೀಂ ತಯಾರಿಕಾ, ದಾಸ್ತಾನು ಕಟ್ಟಡದಲ್ಲಿ ಭಾರೀ ಅಗ್ನಿ ದುರಂತ - 5 ಕೋಟಿ ರೂ. ಮೌಲ್ಯದ ಸೊತ್ತುಗಳು ಬೆಂಕಿಗಾಹುತಿ
Tuesday, March 28, 2023
ಮಂಗಳೂರು: ನಗರದ ಹೊರವಲಯದ ಅಡ್ಯಾರ್ ನಲ್ಲಿರುವ ಪೋಲಾರ್ ಐಸ್ ಕ್ರೀಂ ಸೂಪರ್ ಸ್ಟಾಕಿಸ್ಟ್ ಎಂಬ ನಂದಿನಿ ಐಸ್ ಕ್ರೀಂ ದಾಸ್ತಾನು ಕೇಂದ್ರದಲ್ಲಿ ಬೆಂಕಿ ಅವಘಡ ಸಂಭವಿಸಿ ಭಾರೀ ಪ್ರಮಾಣದಲ್ಲಿ ನಾಶ - ನಷ್ಟ ಸಂಭವಿಸಿರುವ ಘಟನೆ ಮಾ.28ರ ನಸುಕಿನ ವೇಳೆ ನಡೆದಿದೆ.
ಹರ್ಷಮಣಿ ಎಸ್ ರೈ ಎಂಬವರಿಗೆ ಸೇರಿದ ಐಸ್ ಕ್ರೀಂ ದಾಸ್ತಾನು ಇಡುವ ಕಟ್ಟಡದಲ್ಲಿ ಈ ಬೆಂಕಿ ದುರಂತ ಸಂಭವಿಸಿದೆ. ಕಾರವಾರದಿಂದ ಕಾಸರಗೋಡಿನವರೆಗೆ ನಂದಿನಿ ಐಸ್ ಕ್ರೀಂ ವಿತರಣೆ ಮಾಡಲು ಇರುವ ದಾಸ್ತಾನು ಮಳಿಗೆ ಇದಾಗಿದೆ. ಐಸ್ ಕ್ರೀಂ ದಾಸ್ತಾನು ಕಟ್ಟಡದಲ್ಲಿ ಕಾಣಿಸಿಕೊಂಡ ಬೆಂಕಿ ಬಳಿಕ ಐಸ್ ಕ್ರಿಮ್ ತಯಾರಿಕಾ ಘಟಕಕ್ಕೂ ಹಬ್ಬಿದೆ. ನಸುಕಿನ ವೇಳೆ ನಡೆದಿರುವ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ವಾಹನ ಸೇರಿದಂತೆ ಸುಮಾರು 5 ಕೋ.ರೂ ಮೌಲ್ಯದ ಸೊತ್ತುಗಳು ಬೆಂಕಿಗೆ ಆಹುತಿಯಾಗಿವೆ. ಮೂರು ಅಗ್ನಿಶಾಮಕ ವಾಹನಗಳು ಸುಮಾರು ನಾಲ್ಕು ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಿಯಂತ್ರಿಸಿವೆ.