ಮಂಗಳೂರು: ಖಾಸಗಿ ಬಸ್ ಧಾವಾಂತಕ್ಕೆ ಮತ್ತೊಂದು ಬಲಿ - ಮಹಿಳೆ ಸ್ಥಳದಲ್ಲಿಯೇ ದುರ್ಮರಣ
Thursday, March 30, 2023
ಮಂಗಳೂರು: ಖಾಸಗಿ ಬಸ್ ಗಳ ಧಾವಾಂತಕ್ಕೆ ನಗರದ ಬೆಂದೂರುವೆಲ್ ನಲ್ಲಿ ಒಂದೇ ವಾರದ ಅಂತರದಲ್ಲಿ ಎರಡನೇ ಬಲಿಯಾಗಿದೆ. ತಾಯಿ - ಮಗ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಬಸ್ಸು ಢಿಕ್ಕಿ ಹೊಡೆದು ಬಾಲಕ ಸ್ಥಳದಲ್ಲಿಯೇ ಮೃತಪಟ್ಟ ನೆನಪು ಮಾಸುವ ಮುನ್ನವೇ ಇಂದು ಮತ್ತೊಂದು ಅಪಘಾತ ನಡೆದು ಮಹಿಳೆಯೋರ್ವರು ಸ್ಥಳದಲ್ಲಿಯೇ ದುರ್ಮರಣಕ್ಕೀಡಾಗಿದ್ದಾರೆ.
ಐರಿನ್ ಡಿಸೋಜ(65) ಅಪಘಾತಕ್ಕೆ ಬಲಿಯಾದ ಮಹಿಳೆ.
ಐರಿನ್ ಡಿಸೋಜ ಮಧ್ಯಾಹ್ನ 12ರ ಸುಮಾರಿಗೆ ಬೆಂದೂರುವೆಲ್ ಸರ್ಕಲ್ ನಲ್ಲಿ ಬಸ್ ಸರಿಪಳ್ಳದಿಂದ ಮಂಗಳೂರು ಕಡೆಗೆ ಬರುತ್ತಿತ್ತು. ಆ್ಯಗ್ನೇಸ್ ಸರ್ಕಲ್ ನಿಂದ ಬೆಂದೂರುವೆಲ್ ಕಡೆಗೆ ಆಗಮಿಸಿದ ಬಸ್ ನಿಲ್ದಾಣದಲ್ಲಿ ನಿಂತಿದೆ. ಪ್ರಯಾಣಿಕರನ್ನು ಇಳಿಸುತ್ತಿದ್ದ ವೇಳೆ ಅದೇ ಬಸ್ ನಿಂದ ಐರಿನ್ ಡಿಸೋಜ ಅವರು ಇಳಿದಿದ್ದಾರೆ. ಆ ಬಳಿಕ ಅವರು ಬಸ್ ಮುಂಭಾಗದಿಂದ ರಸ್ತೆಯನ್ನು ದಾಟಲು ಯತ್ನಿಸುತ್ತಿದ್ದರು.
ಈ ವೇಳೆ ಬಸ್ ಅನ್ನು ಚಾಲಕ ಏಕಾಏಕಿ ಅಜಾಗರೂಕತೆಯಿಂದ ಬಸ್ಸನ್ನು ಮುಂದಕ್ಕೆ ಚಲಾಯಿಸಿದ್ದಾನೆ. ಪರಿಣಾಮ ಬಸ್ ಐರಿನ್ ಡಿಸೋಜ ಅವರಿಗೆ ಡಿಕ್ಕಿಯಾಗಿ ಕೆಳಗೆಬಿದ್ದ ಅವರ ಮೇಲೆಯೇ ಬಸ್ ಹರಿದಿದೆ. ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಕ್ಷಣ ಸ್ಥಳಕ್ಕೆ ಟ್ರಾಫಿಕ್ ಎಸಿಪಿ ಗೀತಾ ಕುಲಕರ್ಣಿ ಹಾಗೂ ಪೊಲೀಸರು ಸ್ಥಳಕ್ಕೆ ದೌಢಾಯಿಸಿ ಪರಿಶೀಲನೆ ನಡೆಸಿದ್ದಾರೆ. ಬಸ್ ಚಾಲಕ ಬಸ್ ನಿಲ್ಲಿಸದೆ ಪರಾರಿಯಾಗಿದ್ದಾನೆ.
ಈ ವೇಳೆ ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿ ಆಕ್ರೋಶಗೊಂಡು ಪ್ರತಿಭಟನೆ ನಡೆಸಿದ್ದಾರೆ. ಪದೇಪದೇ ನಗರದಲ್ಲಿ ಇಂತಹ ಅಪಘಾತಗಳು ನಡೆದು ಸಾವು - ನೋವು ಸಂಭವಿಸುತ್ತಿದ್ದು, ಪೊಲೀಸರು ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸ್ಥಳಕ್ಕೆ ಪೊಲೀಸ್ ಆಯುಕ್ತರು ಬರಬೇಕೆಂದು ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರು ನಗರದ ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಅವೈಜ್ಞಾನಿಕ ಸಿಗ್ನಲ್ ತೆರವುಗೊಳಿಸುವ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.