ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ- 250 ಸೀಟು ; ಪರೀಕ್ಷೆಗೆ 13617 ವಿದ್ಯಾರ್ಥಿಗಳು!
ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ- 250 ಸೀಟು ; ಪರೀಕ್ಷೆಗೆ 13617 ವಿದ್ಯಾರ್ಥಿಗಳು !
ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ ಮುಂದಿನ ಶೈಕ್ಷಣಿಕ ಸಾಲಿಗೆ 6ರಿಂದ 9ನೇ ತರಗತಿ ಉಚಿತ ಶಿಕ್ಷಣ ಸೌಲಭ್ಯಕ್ಕೆ ನಡೆದ ಪರೀಕ್ಷೆಯಲ್ಲಿ ರಾಜ್ಯದ ವಿವಿಧೆಡೆಯಿಂದ 13617 ವಿದ್ಯಾರ್ಥಿಗಳು ಹಾಜರಾದರು.
ಒಟ್ಟು 250 ಸೀಟುಗಳಿಗೆ 14158 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅವರಲ್ಲಿ ಆರನೇ ತರಗತಿಗೆ 9357 ಏಳನೇ ತರಗತಿಗೆ 1553 ಎಂಟನೇ ತರಗತಿಗೆ 1964 ಒಂಬತ್ತನೇ ತರಗತಿಗೆ 743 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ಆಳ್ವಾಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಭಾನುವಾರ ಬೆಳಿಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಸೇರಿದಂತೆ ಒಟ್ಟು 26000ಕ್ಕೂ ಅಧಿಕ ಮಂದಿ ಸೇರಿದ್ದರು. ವಿದ್ಯಾರ್ಥಿಗಳಿಗೆ ಉಚಿತ ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು.
ಸತತ ಆರು ವರ್ಷಗಳಿಂದ ರಾಜ್ಯದಲ್ಲಿ ಇರುವ 15000ಕ್ಕೂ ಅಧಿಕ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳ ಪೈಕಿ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯು ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಶಾಲಾ ವಿಶ್ಲೇಷಣೆ ಮತ್ತು ಮೌಲ್ಯಾಂಕದಲ್ಲಿ ನಂಬರ್ ವನ್ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಕನ್ನಡ ಮಾಧ್ಯಮ ಶಾಲೆಯನ್ನು ಹೇಗೆ ಕಟ್ಟಬೇಕು ಎಂಬುದಕ್ಕೆ ನಮ್ಮ ಸಂಸ್ಥೆ ಮಾದರಿಯಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು.