ಮಂಗಳೂರು: ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿಸಿ ಕೋಟ್ಯಂತರ ರೂ. ವಂಚನೆ - ಓರ್ವ ಅರೆಸ್ಟ್
Monday, March 20, 2023
ಮಂಗಳೂರು: ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದ್ದಲ್ಲಿ ಹೆಚ್ಚಿನ ಲಾಭ ಪಡೆಯಬಹುದೆಂದು ಸಾರ್ವಜನಿಕರನ್ನು ನಂಬಿಸಿ ಹೂಡಿಕೆ ಮಾಡಿಸಿ ಕೋಟ್ಯಂತರ ರೂ. ವಂಚನೆ ಮಾಡಿರುವ ಪ್ರಕರಣದಲ್ಲಿ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕೇರಳ ರಾಜ್ಯದ ಮಲಪ್ಪುರಂ ನಿವಾಸಿ ಹಂಝಾ ಸಿ.ಟಿ.(42) ಬಂಧಿತ ಆರೋಪಿ.
ಕ್ರಿಪ್ಟೋ ಕರೆನ್ಸಿ ವ್ಯವಹಾರದಲ್ಲಿ ಹೂಡಿಕೆ ಮಾಡಿದ್ದಲ್ಲಿ ಕೋಟ್ಯಂತರ ರೂ. ಲಾಭ ಗಳಿಸಬಹುದೆಂದು ಸಾರ್ವಜನಿಕರಿಂದ ಆರೋಪಿ ಹಂಝಾ ಹಣ ಹೂಡಿಕೆ ಮಾಡಿಸಿದ್ದನು. ಬಳಿಕ ತಿಂಗಳಿಗೆ ಶೇ.25 ಲಾಭಾಂಶ ನೀಡುವುದಾಗಿ ನಂಬಿಸಿದ್ದನು. ಅದರಂತೆ ಮಂಗಳೂರು ಕಣ್ಣೂರು ಪರಿಸರದ ನಿವಾಸಿ ಹಾಗೂ ಇತರ ಸಾರ್ವಜನಿಕರು ಕ್ರಿಪ್ಟೋ ಕರೆನ್ಸಿಗೆಂದು ಕೋಟ್ಯಂತರ ರೂ. ಹೂಡಿಕೆ ಮಾಡಿದ್ದರು. ಆದರೆ ಆ ಬಳಿಕ ಲಾಭಾಂಶವನ್ನೂ ನೀಡದೆ ವಂಚನೆ ಮಾಡಿದ್ದಾನೆಂದು ದೂರು ಬಂದಿರುವ ಹಿನ್ನೆಲೆಯಲ್ಲಿ ಆರೋಪಿ ಹಂಝಾನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿರುತ್ತಾನೆ.
ಆರೋಪಿ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಪಿ ಎ ಹೆಗ್ಡೆ, ಪೊಲೀಸ್ ಇನ್ಸ್ ಪೆಕ್ಟರ್ ಶ್ಯಾಮ್ ಸುಂದರ್ ಹೆಚ್. ಎಂ., ಪಿಎಸ್‌ಐ ರಾಜೇಂದ್ರ ಹಾಗೂ ಸಿಸಿಬಿ ಸಿಬ್ಬಂದಿ ಪಾಲ್ಗೊಂಡಿದ್ದರು.