ಶಾರುಖ್ ಖಾನ್ ನಿವಾಸದ ಕಂಪೌಂಡ್ ಗೆ ಅಕ್ರಮ ಪ್ರವೇಶ: ಇಬ್ಬರು ಅರೆಸ್ಟ್
Friday, March 3, 2023
ಮುಂಬೈ: ಬಾಲಿವುಡ್ ನಟ ಶಾರೂಖ್‌ಖಾನ್ ನಿವಾಸದ ಕಂಪೌಂಡ್ ಒಳಗಡೆ ಅಕ್ರಮ ಪ್ರವೇಶ ಮಾಡಿರುವ ಆರೋಪದಲ್ಲಿ ಗುಜರಾತ್ ನ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಸುಮಾರು 20 ವರ್ಷ ವಯಸ್ಸಿನ ಇಬ್ಬರು ಮನ್ನತ್ ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದನ್ನು ಭದ್ರತಾ ಸಿಬ್ಬಂದಿ ಪತ್ತೆ ಮಾಡಿದ್ದರು. ಇವರನ್ನು ಭದ್ರತಾ ಸಿಬ್ಬಂದಿ ಹಿಡಿದು ವಿಚಾರಣೆ ನಡೆಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇಬ್ಬರ ಬಂಧನಕ್ಕೆ ತಕ್ಷಣ ತಂಡವನ್ನು ಕಳುಹಿಸಿಕೊಟ್ಟಿದ್ದಾಗಿ ಬಾಂದ್ರಾ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸುದೀರ್ಘ ವಿಚಾರಣೆ ನಡೆಸಿ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇಬ್ಬರೂ ಶಾರೂಖ್ ಅವರ ಅಭಿಮಾನಿಗಳಾಗಿದ್ದು, ಖಾನ್ ಅವರ ನಿಕಟ ಸಾಮೀಪ್ಯ ಬಯಸಿದ್ದರು. ಇದರಲ್ಲಿ ಯಾವುದೇ ದುರುದ್ದೇಶ ಮೇಲ್ನೋಟಕ್ಕೆ ಕಂಡುಬಂದಿಲ್ಲ. ಯುವಕರಿಬ್ಬರ ಕುಟುಂಬಗಳ ಸಂಪರ್ಕ ವಿವರಗಳನ್ನು ಪಡೆದು ಕರೆ ಮಾಡಿ ಮಾಹಿತಿ ನೀಡಿದ್ದೇವೆ. ಇವರು ಯಾವುದೇ ಬಗೆಯ ಅಪರಾಧ ನಂಟು ಹೊಂದಿದ್ದಾರೆಯೇ ಎಂಬ ಬಗ್ಗೆ ಗುಜರಾತ್ ಪೊಲೀಸರ ಜತೆ ಚರ್ಚಿಸಲಾಗುತ್ತಿದೆ. ಅಲ್ಲದೆ ಮುಂಬೈಗೆ ಆಗಮಿಸಿರುವ ಬಗ್ಗೆ ಹಾಗೂ ಅವರ ಚಲನ ವಲನಗಳನ್ನು, ಹೇಳಿಕೆಯನ್ನು ದೃಢೀಕರಿಸಲಾಗುತ್ತಿದೆ ಎಂದು ವಿವರ ನೀಡಿದ್ದಾರೆ.