ಕಾರು ಅಪಘಾತದಲ್ಲಿ ಸ್ನೇಹಿತೆಯ ದುರ್ಮರಣ: ನಟಿ ಯಶಿಕಾ ಆನಂದ್ ಗೆ ಬಂಧನದ ಭೀತಿ
ಚೆನ್ನೈ: ಕಾಲಿವುಡ್‌ನ “ಇರುಟ್ಟು ಅರಯಿಲ್ ಮುರಟ್ಟು ಕುತ್ತು” ವಯಸ್ಕರ ಹಾಸ್ಯ ಸಿನಿಮಾ ಹಾಗೂ ಬಿಗ್‌ಬಾಸ್ ಖ್ಯಾತಿಯ ನಟಿ ಯಶಿಕಾ ಆನಂದ್, 2021ರಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆರು ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದು ಚೇತರಿಸಿಕೊಂಡು ಸಂಪೂರ್ಣ ಸಹಜ ಜೀವನಕ್ಕೆ ಮರಳಿದ್ದಾರೆ. ಇದೀಗ ಸಾವಿನ ಅಂಚಿಗೆ ಹೋಗಿ ಅದೃಷ್ಟವಶಾತ್ ಬದುಕಿ ಬಂದಿರುವ ಅವರು ಹಿಂದಿನ ನೋವನ್ನೆಲ್ಲ ಮರೆತು ಮತ್ತೆ ಗ್ಲಾಮರ್ ಲೋಕದ ಕ್ಷಣಗಳನ್ನು ಸವಿಯುತ್ತಿದ್ದಾರೆ.
ಆದರೆ ಈಗ ಈ ಗ್ಲಾಮರ್ ಗೊಂಬೆಗೆ ಬಂಧನದ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. 2021ರಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆಂಗಲಪಟ್ಟು ನ್ಯಾಯಾಲಯ ಮಾರ್ಚ್ 23ರಂದು ಬಂಧನದ ವಾರೆಂಟ್ ಜಾರಿಗೊಳಿಸಿತ್ತು. ಮಾರ್ಚ್ 21ರಂದು ವಿಚಾರಣೆ ಹಾಜರಾಗುವಂತೆ ಕೋರ್ಟ್ ನೀಡಿದ್ದ ಆದೇಶವನ್ನು ಉಲ್ಲಂಘಿಸಿದ್ದಕ್ಕೆ ಬಂಧನ ವಾರೆಂಟ್ ಜಾರಿಯಾಗಿತ್ತು. ಎಪ್ರಿಲ್ 25ರೊಳಗೆ ಆಕೆ ಕೋರ್ಟ್‌ಗೆ ಹಾಜರಾಗದಿದ್ದರೆ ಆಕೆಯನ್ನು ಬಂಧಿಸಿ ಎಂದು ಪೊಲೀಸರಿಗೆ ನ್ಯಾಯಾಲಯ ಆದೇಶಿಸಿತ್ತು.
ಯಶಿಕಾ ಆನಂದ್ ಅಂತಿಮವಾಗಿ ಮಾರ್ಚ್ 27ರಂದು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಅಪಘಾತದ ಪ್ರಕರಣದ ಕುರಿತು ತನ್ನ ಹೇಳಿಕೆಯನ್ನು ದಾಖಲಿಸಿ, ತಮ್ಮ ವಿರುದ್ಧದ ಬಂಧನ ವಾರೆಂಟ್ ಅನ್ನು ವಜಾಗೊಳಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಈ ವೇಳೆ ನಟಿಯ ವರ್ತನೆಯನ್ನು ನ್ಯಾಯಾಲಯ ಖಂಡಿಸಿದೆ.
2021, ಜುಲೈ 25ರಂದು ತಡರಾತ್ರಿ ಯಶಿಕಾ ಆನಂದ್ ತಮ್ಮ ಸ್ನೇಹಿತರೊಂದಿಗೆ ತೆರಳುತ್ತಿದ್ದ ಕಾರು ಚೆನ್ನೈನ ಈಸ್ಟ್ ಕೋಸ್ಟ್ ಬಳಿ ಅಪಘಾತಕ್ಕೊಳಗಿತ್ತು. ಅಪಘಾತದಿಂದ ಯಶಿಕಾ ಗಂಭೀರವಾಗಿ ಗಾಯಗೊಂಡಿದ್ದರು. ಯಶಿಕಾ ಸ್ನೇಹಿತೆ ವಲ್ಲಿಚಟ್ಟಿ ಭವಾನಿ (28) ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದರು. ಈ ವೇಳೆ ಕಾರಿನಲ್ಲಿ ಇನ್ನಿಬ್ವರು ಯುವಕರಿದ್ದರು. ಕಾರು ಮಾಮುಲ್ಲಾಪುರಂನಿಂದ ಚೆನ್ನೈ ಕಡೆಗೆ ಸಾಗುತ್ತಿತ್ತು. ಯಶಿಕಾ ಅವರ ಸ್ನೇಹಿತ ಕಾರು ಓಡಿಸುತ್ತಿದ್ದ. ರಾತ್ರಿ 11.45ರ ವೇಳೆಗೆ ಚಾಲಕನ ನಿಯಂತ್ರಣ ಕಳೆದುಕೊಂಡು ಕಾರು ಹೆದ್ದಾರಿಯ ಮಧ್ಯದ ತಡೆಗೋಡೆಗೆ ಢಿಕ್ಕಿಯಾಗಿದೆ.
ಈ ವೇಳೆ ಕಾರು ಅಡ್ಡಾದಿಡ್ಡಿ ಚಲಿಸಿ ತಿರುಗಿ ಬಿದ್ದಿತ್ತು. ಸ್ಥಳದಲ್ಲಿದ್ದವರು ಮತ್ತು ಇತರ ವಾಹನ ಚಾಲಕರು ಕಾರಿನಲ್ಲಿದ್ದವರನ್ನು ರಕ್ಷಿಸಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಆದರೆ ಅಪಘಾತದಲ್ಲಿ ವಲ್ಲಿಚಟ್ಟಿ ಭವಾನಿ ಸ್ಥಳದಲ್ಲೇ ಮೃತಪಟ್ಟಿದ್ದರು. ಇತರರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಭವಾನಿ ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಅಮೆರಿಕದಲ್ಲಿ ಕೆಲಸ ಮಾಡಿಕೊಂಡಿದ್ದರು.
ಅಪಘಾತದ ಬಳಿಕ ಯಶಿಕಾ ಆನಂದ್ ಅನೇಕ ಮುರಿತಗಳಿಂದ ಬಳಲುತ್ತಿದ್ದರು. ಆದ್ದರಿಂದ ಅವರು ಹಲವು ಶಸ್ತ್ರಚಿಕಿತ್ಸೆಗಳ ಬಳಿಕ ಚೇತರಿಸಿಕೊಂಡಿದ್ದಾರೆ. ಅಪಘಾತದ ಸಮಯದಲ್ಲಿ ಯಶಿಕಾ ಕಾರಿನಲ್ಲಿದ್ದ ಕಾರಣ ಐಪಿಸಿ ಸೆಕ್ಷನ್ 304ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಸೇರಿದಂತೆ 3 ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.