ಮಂಗಳೂರು: ಮಹಿಳೆಗೆ ಆತ್ಮಹತ್ಯೆ ಮಾಡಲು ಪ್ರಚೋದನೆ - ಆರೋಪಿ ಅರೆಸ್ಟ್
Sunday, March 5, 2023
ಮಂಗಳೂರು: ಕೊಡಿಯಾಲಗುತ್ತು ನಿವಾಸಿ ಮಹಿಳೆಯೊಬ್ಬರು ಮಾ1ರಂದು ತಮ್ಮ ಮನೆಯಲ್ಲಿಯೇ ತಮ್ಮಿಬ್ಬರು ಪುತ್ರಿಯರೊಂದಿಗೆ ನೇಣು ಬಿಗಿದು ಆತ್ಮಹತ್ಯೆಗೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬರ್ಕೆ ಠಾಣಾ ಪೊಲೀಸರು ಕೇಶವ ಎಂಬ ಆರೋಪಿಯನ್ನು ಬಂಧಿಸಿದ್ದಾರೆ.
ಕೊಡಿಯಾಲಗುತ್ತು ಪರಿಸರದಲ್ಲಿ ವಾಸವಾಗಿರುವ ವಿಜಯಾ ಎಂಬ ಮಹಿಳೆಗೆ ಆರೋಪಿ ಕೇಶವ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಆತ್ಮಹತ್ಯೆಗೆ ಮುನ್ನ ವಿಜಯಾ ಅವರು ಬರೆದಿಟ್ಟಿದ್ದಾರೆ ಎನ್ನಲಾದ ಡೆತ್‌ನೋಟ್ ಪೊಲೀಸರಿಗೆ ವಿಜಯಾ ಮನೆಯಲ್ಲಿ ಪತ್ತೆಯಾಗಿದೆ. ಇದರ ಆಧಾರದಲ್ಲಿ ಪೊಲೀಸರು ತನಿಖೆ ಮುಂದುವರಿಸಿ ಆರೋಪಿ ಕೇಶವವನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೋಡಿಯಾಲಗುತ್ತು ನಿವಾಸಿ ವಿಜಯಾ (33) ಅವರು ತಮ್ಮ 4 ವರ್ಷದ ಪುತ್ರಿ ಶೋಭಿಕಾ ಹಾಗೂ 12 ವರ್ಷದ ಪುತ್ರಿಯೊಂದಿಗೆ ನೇಣುಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವೇಳೆ 12 ವರ್ಷ ಪ್ರಾಯದ ಪುತ್ರಿ ಅಪಾಯದಿಂದ ಪಾರಾಗಿದ್ದರು. ಆದರೆ ದುರಾದೃಷ್ಟವಶಾತ್ ವಿಜಯಾ ಮತ್ತು ಶೋಭಿಕಾ ಘಟನೆಯಲ್ಲಿ ಮೃತಪಟ್ಟಿದ್ದರು. ಇದೀಗ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪದಲ್ಲಿ ಬರ್ಕೆ ಪೊಲೀಸರು ಆರೋಪಿ ಕೇಶವ ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿದಿದೆ.