ಹೋಳಿಯಂದು ಯುವತಿ ಬಣ್ಣ ಹಚ್ಚಿದ ಕಾನೂನು ವಿದ್ಯಾರ್ಥಿಯನ್ನು ಅಪಹರಿಸಿ, ಬೆತ್ತಲೆ ಮಾಡಿ ಹಲ್ಲೆ
Wednesday, March 22, 2023
ಕೋಲಾರ: ಹೋಳಿಯ ಸಂದರ್ಭ ಯುವತಿಗೆ ಬಣ್ಣ ಹಾಕಿದ್ದಕ್ಕೆ ಕಾನೂನು ವಿದ್ಯಾರ್ಥಿಯೊಬ್ಬನನ್ನು ಅಪಹರಿಸಿ, ಬೆತ್ತಲೆ ಮಾಡಿ ಹಲ್ಲೆಗೈದಿರುವ ಘಟನೆ ಕೋಲಾರ ತಾಲೂಕಿನ ಬೆಳಮಾರನಹಳ್ಳಿಯಲ್ಲಿ ನಡೆದಿದೆ.
ಬೆಳಮಾರನಹಳ್ಳಿಯ ನಿವಾಸಿ ಮಧು ಬಿ.ಸಿ ಹಲ್ಲೆಗೊಳ್ಳಗಾದ ಕಾನೂನು ವಿದ್ಯಾರ್ಥಿ. ಆರೋಪಿ ಮಧು ಡಿ.ಎನ್.ಡಿ ಹಾಗೂ ಆತನ ಸ್ನೇಹಿತರಾದ ಶಿವರಾಜ್, ಅಭಿಲಾಷ್, ರಾಹುಲ್ ಮತ್ತು ಪ್ರಮೋದ್ ಮಧು ಬಿ.ಸಿ.ಯನ್ನು ಅಪಹರಿಸಿ, ಬೆತ್ತಲೆಗೊಳಿಸಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಈತ ತನ್ನದೇ ಊರಿನ ಯುವತಿಗೆ ಬಣ್ಣ ಹಚ್ಚಿದ್ದಕ್ಕೆ ಎಂದು ಹಲ್ಲೆ ಮಾಡಲಾಗಿದೆ. ಹೋಳಿ ಹಬ್ಬದ ದಿನದಂದು ಬಸ್‌ನಲ್ಲಿ ಯುವತಿಗೆ ಮಧು ಬಣ್ಣ ಹಚ್ಚಿದ್ದ. ಈ ವಿಚಾರ ತಿಳಿದು ಮಧು ಡಿ.ಎನ್.ಡಿ ಮತ್ತು ಆತನ ಸಂಗಡಿಗರು ಮಧುವನ್ನು ಕರೆಸಿ, ಶೆಡ್ ವೊಂದರಲ್ಲಿ ಬಟ್ಟೆ ಬಿಚ್ಚಿಸಿ ಹಲ್ಲೆ ಮಾಡಿದ್ದಾರೆ.
ಈ ಘಟನೆ ಮಾ.17ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಗಾಯಾಳು ಮಧುಗೆ ಕೋಲಾರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೆಮಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.