ಪ್ರಿಯಕರನನ್ನು ನೋಡಲೆಂದು ಬಂದ ಗಗನಸಖಿ ಬಹುಮಹಡಿಯಿಂದ ಬಿದ್ದು ಸಾವು: ಕೊಲೆಯೋ?, ಆತ್ಮಹತ್ಯೆಯೋ?
Sunday, March 12, 2023
ಬೆಂಗಳೂರು: ಪ್ರಿಯಕರನನ್ನು ಭೇಟಿಯಾಗಲೆಂದು ಆಗಮಿಸಿದ್ದ ಗಗನಸಖಿಯೊಬ್ಬಳು ಅಪಾರ್ಟ್‌ಮೆಂಟ್‌ನ ಬಹುಮಹಡಿ ಕಟ್ಟಡದಿಂದ ಬಿದ್ದು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ಬೆಂಗಳೂರಿನ ಕೋರಮಂಗಲದ 8ನೇ ಬ್ಲಾಕ್‌ನ ರೇಣುಕಾ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌ನಲ್ಲಿ ಶುಕ್ರವಾರ ಮಧ್ಯರಾತ್ರಿ ನಡೆದಿದೆ.
ಹಿಮಾಚಲಪ್ರದೇಶ ಮೂಲದ ಅರ್ಚನಾ ಧೀಮನ್ (28) ಮೃತಪಟ್ಟ ಗಗನಸಖಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಗಗನಸಖಿಯ ಪ್ರಿಯಕರ ಮಂಗಳೂರು ಮೂಲದ ಆದೇಶ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತಪಟ್ಟ ಅರ್ಚನಾ ಅಂತಾರಾಷ್ಟ್ರೀಯ ವಿಮಾನಯಾನ ಕಂಪನಿಯಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದಳು. ಆಕೆಯ ಪ್ರಿಯಕರ ಆದೇಶ್ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಆರು ತಿಂಗಳ ಹಿಂದೆ ಸ್ನೇಹಿತರ ಮೂಲಕ ಅರ್ಚನಾ ಹಾಗೂ ಆದೇಶ್ ಪರಿಚಿತರಾಗಿದ್ದರು. ಈ ಪರಿಚಯ ಸ್ನೇಹಕ್ಕೆ ತಿರುಗಿ ಬಳಿಕ ಇಬ್ಬರೂ ಪ್ರೀತಿಸಲಾರಂಭಿಸಿದ್ದಾರೆ. ಆದರೆ ಕೆಲ ವಿಚಾರಗಳಲ್ಲಿ ಇವರಿಬ್ಬರ ಮಧ್ಯೆ ಭಿನ್ನಾಭಿಪ್ರಾಯವಿತ್ತು. ಆದ್ದರಿಂದ ಆಗಾಗ ಜಗಳವೂ ನಡೆಯುತ್ತಿತ್ತು ಎನ್ನಲಾಗಿದೆ.
ಕೆಲಸದ ನಿಮಿತ್ತ ದುಬೈನಲ್ಲಿದ್ದ ಅರ್ಚನಾ ನಾಲ್ಕು ದಿನದ ಹಿಂದೆ ದುಬೈನಿಂದ ಬೆಂಗಳೂರಿಗೆ ಬಂದಿದ್ದಳು. ಈ ನಾಲ್ಕು ದಿನಗಳಲ್ಲಿ ಆದೇಶ್ ಹಾಗೂ ಅರ್ಚನಾ ಇಬ್ಬರೂ ಜೊತೆಗಿದ್ದರು. ಶುಕ್ರವಾರ ಸಂಜೆ ಕೋರಮಂಗಲದ ಫೋರಂ ಮಾಲ್‌ಗೆ ಸಿನಿಮಾಕ್ಕೆ ತೆರಳಿದ್ದರು. ರಾತ್ರಿ ಸಿನಿಮಾ ನೋಡಿಕೊಂಡು ಅಪಾರ್ಟ್‌ಮೆಂಟ್‌ಗೆ ಬಂದಿದ್ದು, ಇಬ್ಬರೂ ಪಾರ್ಟಿ ಮಾಡಿದ್ದಾರೆ. ಈ ವೇಳೆ ಯಾವುದೋ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದು ಜಗಳ ನಡೆದಿದೆ. ಪರಿಣಾಮ ಮಧ್ಯರಾತ್ರಿ 12 ಗಂಟೆಗೆ ಅರ್ಚನಾ ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾಳೆ. ಪರಿಣಾಮ ತಲೆಗೆ ಗಂಭೀರವಾದ ಗಾಯಗೊಂಡು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಸದ್ಯ
ಯಾವ ವಿಚಾರಕ್ಕೆ ಆದೇಶ್ ಹಾಗೂ ಅರ್ಚನಾ ನಡುವೆ ಜಗಳ ನಡೆದಿದೆ ಎಂಬುದರ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಜಗಳದ ವೇಳೆ ಅರ್ಚನಾ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಯೇ ಅಥವಾ ಪ್ರಿಯಕರ ಆದೇಶ್ ಕೋಪಗೊಂಡು ಮಹಡಿಯಿಂದ ತಳ್ಳಿ ಕೊಲೆ ಮಾಡಿದ್ದಾನೆಯೇ ಎಂಬುದು ಮುಂದಿನ ತನಿಖೆಯಿಂದ ತಿಳಿದುಬರಬೇಕಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.