ಮಂಗಳೂರು: ಗಾಂಜಾ ನಶೆಯಲ್ಲಿದ್ದ ಇಬ್ಬರು ಪೊಲೀಸ್ ವಶಕ್ಕೆ
Friday, March 10, 2023
ಮಂಗಳೂರು: ಗಾಂಜಾ ನಶೆಯಲ್ಲಿದ್ದ ಇಬ್ಬರು ಆರೋಪಿಗಳನ್ನು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.
ಕೇರಳ ರಾಜ್ಯದ ಕಣ್ಣೂರು ಅಲಿಕೋಡೆ ನಿವಾಸಿ ಮುಹಮ್ಮದ್ ಅಸ್ಗರ್ (26) ಎಂಬಾತ ಮಾದಕ ಸೇವನೆ ಪ್ರಕರಣದಲ್ಲಿ ಮಂಗಳೂರು ಪೊಲೀಸರಿಗೆ ಬೇಕಾಗಿದ್ದ. ಈತನನ್ನು ಕೇರಳ ರಾಜ್ಯದಲ್ಲಿ ಮಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದರು. ಈ ಸಂದರ್ಭದಲ್ಲೂ ಆತ ಗಾಂಜಾ ನಶೆಯಲ್ಲಿರುವುದು ಪೊಲೀಸರ ಗಮನಕ್ಕೆ ಬಂದಿದೆ. ತಕ್ಷಣ ವೈದ್ಯಕೀಯ ತಪಾಸಣೆ ನಡೆಸಿದ್ದಾರೆ. ಆಗ ಆತ ಮಾದಕ ಸೇವನೆ ಮಾಡಿರುವುದು ದೃಢಪಟ್ಟಿದೆ.
ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಅಡ್ಯಾರ್ ಕಣ್ಣೂರು ಬಳಿಯ ಕೊಡಕ್ಕಲ್ ಬಸ್ ನಿಲ್ದಾಣದ ಬಳಿ ಅನುಮಾನಾಸ್ಪದ ರೀತಿಯಲ್ಲಿದ್ದ ವ್ಯಕ್ತಿಯೋರ್ವನ ಚಲನವಲನವನ್ನು ಪೊಲೀಸರು ಗಮನಿಸಿದ್ದಾರೆ. ತಕ್ಷಣ ಆತನನ್ನು ಕಂಕನಾಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ಗಾಂಜಾ ಸೇವನೆ ಮಾಡಿರುವುದು ತಿಳಿದು ಬಂದಿದೆ. ಆಲ್ವಿನ್ ಸಿಕ್ವೆರಾ (37) ಎಂಬ ಹೆಸರಿನ ಈತ ಬಿಜೈ ಆನೆಗುಂಡಿಯ ನಿವಾಸಿಯಾಗಿದ್ದಾನೆ.
ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.