ಮಂಗಳೂರು: ಸಿಎಸ್ಐ ಸಭಾಪ್ರಾಂತದ ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳದ ಆರೋಪ - ಆರು ಮಂದಿಯ ವಿರುದ್ಧ ಪ್ರಕರಣ ದಾಖಲು
Wednesday, March 8, 2023
ಮಂಗಳೂರು: ಸಿಎಸ್ಐ ಕೆಎಸ್ ಡಿ ಸಭಾಪ್ರಾಂತದಲ್ಲಿ ಉದ್ಯೋಗಿಯಾಗಿರುವ ಮಹಿಳೆ ತಾನು ಕೆಲಸ ಮಾಡುವ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದೇನೆ. ತನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಕೆಲಸದಿಂದ ಕಿತ್ತೆಸೆದು ಶೋಷಿಸಲಾಗುತ್ತಿದೆ ಎಂದು ಅಳಲು ತೋಡಿಕೊಂಡು ಮೈಸೂರಿನ ಒಡನಾಡಿ ಸಂಸ್ಥೆಯ ಕದ ತಟ್ಟಿದ್ದರು. ಇದೀಗ ಒಡನಾಡಿ ಸಂಸ್ಥೆಯ ಬೆಂಬಲದೊಂದಿಗೆ ಮಂಗಳೂರಿನ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಈ ಹಿನ್ನಲೆಯಲ್ಲಿ ಆರು ಮಂದಿಯ ಮೇಲೆ ಪ್ರಕರಣ ದಾಖಲಾಗಿದೆ.
ಮಹಿಳೆ ತನಗಾಗಿರುವ ದೈಹಿಕ ಹಾಗೂ ಮಾನಸಿಕ ಕಿರುಕುಳದ ವಿರುದ್ಧ ಕಳೆದ 200 ದಿನಗಳಿಂದ ಬಿಷಪ್ ಹೌಸ್ ಹೊರಗಡೆ ಒಂಟಿಯಾಗಿ ಪ್ರತಿಭಟನೆ ನಡೆಸುತ್ತಿದ್ದರು. ಪೊಲೀಸ್ ದೂರು ದಾಖಲಿಸಿದ್ದರೂ, ಬಿಷಪ್, ಮೋಡರೇಟರಲ್ಲಿ ದೂರಿತ್ತರೂ ಯಾವ ಪ್ರಯೋಜನವಾಗದೆ ಅವರು ಮೈಸೂರಿನ ಒಡನಾಡಿ ಸಂಸ್ಥೆಯ ಕದ ತಟ್ಟಿದ್ದರು. ಈ ಹಿನ್ನಲೆಯಲ್ಲಿ ಒಡನಾಡಿ ಸಂಸ್ಥೆಯ ಅಧ್ಯಕ್ಷ ಸ್ಟ್ಯಾನ್ಲಿ ಪಿಂಟೋರವರ ಬೆಂಬಲದಲ್ಲಿ ಮಹಿಳೆ ಮಾಧ್ಯಮದ ಮುಂದೆ ಬಂದಿದ್ದಾರೆ.
ಮಹಿಳೆ ಬಲ್ಮಠದಲ್ಲಿರುವ ಸಿಎಸ್ಐ ಕೆಎಸ್ ಡಿ ಸಭಾಪ್ರಾಂತದಲ್ಲಿ ಹತ್ತು ವರ್ಷಗಳಿಂದ ಖಾಯಂ ಉದ್ಯೋಗಿಯಾಗಿ ವೃತ್ತಿ ನಿರ್ವಹಿಸುತ್ತಿದ್ದರು. ವಿಚ್ಛೇದಿತೆಯಾಗಿದ್ದ ಮಹಿಳೆಯ ಅಸಹಾಯಕತೆಯನ್ನು ದುರ್ಬಳಕೆ ಮಾಡಿ ಖಜಾಂಜಿ ವಿನ್ಸಂಟ್ ಪಾಲನ್ನ ಮತ್ತು ಫಾ.ನೋಯೆಲ್ ಕರ್ಕೆಡ ಎಂಬವರು ಆಕೆಗೆ ದೈಹಿಕ , ಮಾನಸಿಕ ಕಿರುಕುಳ ನೀಡಲಾರಂಭಿಸಿದ್ದಾರೆ. ಆಕೆಯ ದೇಹವನ್ನು ಮುಟ್ಟಿ ಲೈಗಿಂಕ ಕಿರುಕುಳ ನೀಡುವುದಲ್ಲದೆ ತಮ್ಮೊಂದಿಗೆ ದೈಹಿಕ ಸಂಪರ್ಕ ಹೊಂದಲು ಒತ್ತಾಯ ಪಡಿಸಿದ್ದಾರೆ. ಅಲ್ಲದೆ ಮೊಬೈಲ್ ನಲ್ಲಿ ಸೆಕ್ಸ್ ವಿಡಿಯೋ ನೋಡುವಂತೆ ಬಲವಂತ ಮಾಡಿರುತ್ತಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಅವರ ಯಾವ ಕಿರುಕುಳಕ್ಕೂ ಬಗ್ಗದ ಮಹಿಳೆಯನ್ನು ಕೆಲಸದಿಂದ ತೆಗೆದು ಹಾಕಲು ಹುನ್ನಾರ ನಡೆಸಲಾಗಿದೆ.
ಹಾಗೂ ಬಿಷಪ್ ಡೈವರ್ ಕರುಣಾಕರ ಕುಂದರ್ ರವರು ರೇಶ್ಮಾ ಸೋನ್ಸ್ ರನ್ನು ಅವಾಚ್ಯ ಶಬ್ದಗಳಿಂದ ಬೈಯುತ್ತಿರುತ್ತಾರೆ. ಜೊತೆಗೆ ಸಿಸ್ಟರ್ ಸುಜಾತ ಮತ್ತು ಕಾರ್ಯದರ್ಶಿ ವಿಲ್ಲಿಯಂ ಕೇರಿರವರು ರೇಶ್ಮಾರವರನ್ನು ನೀನು ಮಹಿಳೆಯರ ಕುಲಕ್ಕೆ ಕಳಂಕ ಎಂದು ಬೈದಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ತನಿಖೆ ಪ್ರಗತಿಯಲ್ಲಿರುತ್ತದೆ.