
ಹೋಳಿ ಹಬ್ಬದ ನೆಪದಲ್ಲಿ ಜಪಾನಿ ಮಹಿಳೆಗೆ ಕಿರುಕುಳ: ಬಾಂಗ್ಲಾದೇಶಕ್ಕೆ ಹೋದ ಆಕೆ ಹೇಳಿದ್ದೇನು
Saturday, March 11, 2023
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೋಳಿ ಹಬ್ಬದಂದು ಜಪಾನಿ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಈವರೆಗೆ ಮಹಿಳೆ ದೂರು ದಾಖಲಿಸಿಲ್ಲ. ಅಲ್ಲದೆ ಆಕೆ ನಿನ್ನೆ ಬಾಂಗ್ಲಾದೇಶಕ್ಕೆ ತೆರಳಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಮಹಿಳೆ ತಾನು ಬಾಂಗ್ಲಾದೇಶ ತಲುಪಿದ್ದು ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗಿದ್ದೇನೆ ಎಂದು ಟ್ವಿಟ್ ಮಾಡಿದ್ದಾರೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದೆಹಲಿಯ ಪಹರ್‌ಗಂಜ್‌ನಲ್ಲಿ ತಂಗಿದ್ದರು. ಈ ಮೂವರು ಆರೋಪಿಗಳು ಕೂಡ ಅದೇ ಪ್ರದೇಶದವರು ಎಂದು ತಿಳಿದುಬಂದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕಠಿಣ ಕ್ರಮಕ್ಕೆ ಜನರು ಕರೆ ನೀಡಿದ್ದಾರೆ. ವೈರಲ್ ಆಗಿರುವ ವಿಡಿಯೊದಲ್ಲಿ, ಕೆಲ ಯುವಕರು ಆ ಮಹಿಳೆಯನ್ನು ಹಿಡಿದುಕೊಂಡು “ಹೋಳಿ ಹೈ” ಎಂಬ ಘೋಷಣೆಗಳ ನಡುವೆ ಬಣ್ಣಗಳನ್ನು ಬಳಿಯುತ್ತಿದ್ದಾರೆ.
ಒಬ್ಬ ಹುಡುಗ ಅವಳ ತಲೆಯ ಮೇಲೆ ಮೊಟ್ಟೆಯನ್ನು ಒಡೆದು ಹಾಕುತ್ತಿರುವುದನ್ನು ಸಹ ಕಾಣಬಹುದು. ಕೊನೆಗೆ ಆಕೆ ದೂರ ಸರಿಯುವ ಮೊದಲು ತನ್ನನ್ನು ಹಿಡಿದಿಡಲು ಪ್ರಯತ್ನಿಸುವ ವ್ಯಕ್ತಿಗೆ ಅವಳು ಕಪಾಳಮೋಕ್ಷ ಮಾಡುತ್ತಾಳೆ. ಆ ವಿಡಿಯೋದ ಕೊನೆಗೆ ಆ ಮಹಿಳೆಯು ಈ ಕಿರಾತಕರ ದೌರ್ಜನ್ಯಕ್ಕೆ ಸುಸ್ತಾಗಿ ಹೋಗಿರುವುದು ವಿಡಿಯೋದಲ್ಲ ಕಾಣಬಹುದು.ಸ್ಥಳೀಯ ಗುಪ್ತಚರರ ಮೂಲಕ ಆರೋಪಿಗಳನ್ನು ಗುರುತಿಸಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳು ಜಪಾನ್ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದಾರೆ.