
ಸಾಮೂಹಿಕ ಅತ್ಯಾಚಾರದ ಆರೋಪಿಯ ಮನೆಯನ್ನೇ ಕೆಡವಿ ಹಾಕಿದ ಮಹಿಳಾ ಪೊಲೀಸ್ ಅಧಿಕಾರಿಗಳು
Saturday, March 11, 2023
ಭೋಪಾಲ್: ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಯೋರ್ವನ ಮನೆಯನ್ನು ಮಹಿಳಾ ಪೊಲೀಸ್ ಅಧಿಕಾರಿಯ ನೇತೃತ್ವದಲ್ಲಿ ಕೆಡವಿ ಹಾಕಿರುವ ಘಟನೆ ಮಧ್ಯಪ್ರದೇಶ ರಾಜ್ಯದ ದಾಮೋಹ್ಯನಲ್ಲಿ ನಡೆದಿದೆ.
ಸಾಮೂಹಿಕ ಅತ್ಯಾಚಾರ ಆರೋಪಿ ಕೌಶಲ್ ಕೆ. ಚೌಬೆ ಎಂಬಾತನಿಗೆ ಈ ಮನೆ ಸೇರಿತ್ತು. ಆರೋಪಿ ದಾಮೋಡ್ ಎಂಬಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ನಾಲ್ವರು ಆರೋಪಿಗಳಲ್ಲಿ ಓರ್ವನಾಗಿದ್ದ. ಈತ ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದರಿಂದ ಅದನ್ನು ಕೆಡವಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳಾ ಪೊಲೀಸ್ ಅಧಿಕಾರಿಗಳು ಜಿಲ್ಲಾಧಿಕಾರಿಯಿಂದ ಅನುಮತಿ ಪಡೆದು ಜೆಸಿಬಿ ಬಳಸಿ ಆರೋಪಿಯ ಮನೆಯನ್ನು ಕೆಡವಿದ್ದಾರೆ. ಪೊಲೀಸ್ ಅಧಿಕಾರಿ ಪ್ರಶಿತಾ ಕುರ್ಮಿ ನೇತೃತ್ವದಲ್ಲಿ ತೆರವು ಪ್ರಕ್ರಿಯೆ ಪೂರ್ಣಗೊಂಡಿದೆ.
ಗ್ಯಾಂಗ್ ರೇಪ್ ಪ್ರಕರಣದ ಎಲ್ಲ ಆರೋಪಿಗಳನ್ನು ಮಧ್ಯಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಇತರ ಮೂವರು ಆರೋಪಿಗಳನ್ನು ಈ ಹಿಂದೆಯೇ ಬಂಧಿಸಲಾಗಿತ್ತು. ಶುಕ್ರವಾರ ಕೌಶಲ್ ನನ್ನು ಬಂಧಿಸಲಾಗಿದೆ. ಅಪರಾಧ ಕೃತ್ಯಗಳಲ್ಲಿ ತೊಡಗುವವರಲ್ಲಿ ಭಯ ಮೂಡಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ಪ್ರಶಿತಾ ಕುರ್ಮಿ ತಿಳಿಸಿದ್ದಾರೆ.