ಮಂಗಳೂರು: ಕುಕ್ಕರ್ ಬಾಂಬ್ ಸಂತ್ರಸ್ತನಿಗೆ ಆಸರೆಯಾದ ಗುರುಬೆಳದಿಂಗಳು - ಸರಕಾರ ಕೈಬಿಟ್ಟ ಪುರುಷೋತ್ತಮ ಪೂಜಾರಿಗೆ ಮನೆ ಹಸ್ತಾಂತರ
Wednesday, March 22, 2023
ಮಂಗಳೂರು: ನಗರದಲ್ಲಿ ಕೆಲ ತಿಂಗಳ ಹಿಂದೆ ನಡೆದ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಘಟನೆಯಲ್ಲಿ ಗಾಯಾಳುವಾಗಿದ್ದ ಆಟೊಚಾಲಕ ಪುರುಷೋತ್ತಮ ಪೂಜಾರಿಯವರು ಪ್ರಕರಣದಿಂದ ಸಂಪೂರ್ಣ ತತ್ತರಿಸಿ ಹೋಗಿದ್ದರು. ಆದರೆ ಇಂದು 'ಗುರುಬೆಳದಿಂಗಳು' ಟ್ರಸ್ಟ್ ಅವರ ಕನಸನ್ನು ನನಸು ಮಾಡಲು ಹೆಗಲೆಣಿಕೆಯಾಗಿದೆ. ಅಂದು ನೀಡಿದ ಭರವಸೆಯಂತೆ ಮನೆಯನ್ನು ಸುಸಜ್ಜಿತವಾಗಿ ನವೀಕರಣ ಮಾಡಿ ಇಂದು ಪುರುಷೋತ್ತಮ ಪೂಜಾರಿಯವರಿಗೆ ಹಸ್ತಾಂತರ ಮಾಡಿದೆ.
ಹೌದು.... ಪುರುಷೋತ್ತಮ ಪೂಜಾರಿಯವರಿಗೆ ಕುಕ್ಕರ್ ಬಾಂಬ್ ಸ್ಪೋಟದಿಂದಾದ ಗಾಯದ ನೋವಿಗಿಂತ ನಿಶ್ಚಿತಾರ್ಥಗೊಂಡ ಪುತ್ರಿಯ ವಿವಾಹ, ಮನೆ ನವೀಕರಣದ ಚಿಂತೆ ತೀವ್ರವಾಗಿ ಬಾಧಿಸುತ್ತಿತ್ತು. ಸರಕಾರ ಆಸ್ಪತ್ರೆಯ ಖರ್ಚುವೆಚ್ಚವನ್ನು ಭರಿಸುವ ಭರವಸೆ ನೀಡಿತ್ತು. ಆದರೆ ಸಚಿವರಿಬ್ಬರು ವೈಯುಕ್ತಿಕ ನೆಲೆಯಲ್ಲಿ ನೀಡಿರುವ ಹಣ, ಶಾಸಕ ವೇದವ್ಯಾಸ ಕಾಮತ್ ಅವರು ಆಟೋರಿಕ್ಷಾ ನೀಡಿದ್ದು ಬಿಟ್ಟರೆ ಈವರೆಗೆ ಸರಕಾರದಿಂದ ಯಾವ ಪರಿಹಾರವೂ ದೊರಕಿಲ್ಲ. ಪರಿಣಾಮ ಪುತ್ರಿಯ ಮದುವೆ, ಮನೆ ನವೀಕರಣ ವಿಚಾರದಲ್ಲಿ ಪುರುಷೋತ್ತಮ ಪೂಜಾರಿಯವರು ತೀವ್ರ ಎದೆಗುಂದಿದ್ದರು.
ಆದರೆ ಸರಕಾರ ಕೈಬಿಟ್ಟ ಪುರುಷೋತ್ತಮ ಪೂಜಾರಿಯವರಿಗೆ ಗುರುಬೆಳದಿಂಗಳು ಟ್ರಸ್ಟ್ ಆಸರೆಯಾಗಿದೆ. 'ನಿಮ್ಮೊಂದಿಗೆ ನಾವಿದ್ದೇವೆ' ಎಂದು ಟ್ರಸ್ಟ್ ಅಧ್ಯಕ್ಷ ಪದ್ಮರಾಜ್ ಆರ್. ಅಂದು ಆಸ್ಪತ್ರೆಯಲ್ಲಿ ಪುರುಷೋತ್ತಮ ಪೂಜಾರಿಯವರಿಗೆ ಭರವಸೆ ನೀಡಿದ್ದರು. ಈ ಮಾತು ಅವರ ಚೇತರಿಕೆ ಔಷಧಿಯಾಯಿತು. ಡಿಸೆಂಬರ್ ವೇಳೆಗೆ ಗುರುಬೆಳದಿಂಗಳು ಟ್ರಸ್ಟ್ ನೀಡಿದ ಭರವಸೆಯಂತೆ ಸುಮಾರು ಎರಡೂವರೆ ತಿಂಗಳಲ್ಲಿ ಮನೆಯನ್ನು ಸುಸಜ್ಜಿತವಾಗಿ ನವೀಕರಣಗೊಳಿಸಿದೆ. ಇಂದು ಮನೆಯ ಹಸ್ತಾಂತರ ಕಾರ್ಯ ನಡೆದಿದೆ. ಅಲ್ಲದೆ ಮೇ 3ರಂದು ನಡೆಯುವ ಪುರುಷೋತ್ತಮ ಪೂಜಾರಿಯವರ ಪುತ್ರಿಯ ವಿವಾಹವನ್ನು ಮುಂದೆ ನಿಂತು ನೆರವೇರಿಸುವುದಾಗಿ ಪದ್ಮರಾಜ್ ಆರ್. ಭರವಸೆ ನೀಡಿದ್ದಾರೆ. ಈ ಮೂಲಕ ಇಂದಿನ ಯುಗಾದಿಯು ಪುರುಷೋತ್ತಮ ಪೂಜಾರಿಯವರ ಬಾಳಿನಲ್ಲಿ ಭರವಸೆಯ ಬೆಳಕನ್ನು ಮೂಡಿಸಿದೆ.