ನವಜಾತ ಶಿಶು ಅಪಹರಣ: ಸಿಕ್ಕಿಹಾಕಿಕೊಳ್ಳುವಂತೆ ಮಾಡಿತು ಕಿಡ್ನ್ಯಾಪರ್ ಮಹಿಳೆ ಹೇಳಿದ್ದ 'ಹಾಲು-ಉಪ್ಪಿಟ್ಟು' ಪದ
ಬೆಂಗಳೂರು: ಕ್ರಿಮಿನಲ್ ಗಳು ಎಂಥಹ ಚಾಲಾಕಿಗಳಾದರೂ ಒಂದಾದರು ಸುಳಿವು ಬಿಟ್ಟು ಹೋಗಿಯೇ ಹೋಗಿರುತ್ತಾರೆಂಬ ಮಾತು ಅಪರಾಧ ಲೋಕದಲ್ಲಿದೆ. ಅಂಥಹದ್ದೇ ಒಂದು ಸುಳಿವು ದೊರಕಿದ್ದ ಪರಿಣಾಮ ನವಜಾತ ಶಿಶುವಿನ ಅಪಹರಣ ಪ್ರಕರಣವೊಂದನ್ನು ಪೊಲೀಸರುವಬಯಲಿಗೆಳೆದಿದ್ದಾರೆ. ಅದರಲ್ಲೂ ಅಪಹರಣ ಮಾಡಿದ್ದ ಮಹಿಳೆಯೇ ಹೇಳಿದ್ದ 'ಹಾಲು-ಉಪ್ಪಿಟ್ಟು' ಎಂಬೆರಡು ಪದದಿಂದ ಆಕೆ ಸಿಕ್ಕಿ ಬೀಳುವಂತೆ ಮಾಡಿದೆ.
ಮುಳಬಾಗಿಲು ಮೂಲದ, ಶಿವಾಜಿನಗರ ನಿವಾಸಿ ನಂದಿನಿ ಅಲಿಯಾಸ್ ಆಯೆಷಾ ಎಂಬಾಕೆಯೇ ಶಿಶು ಅಪಹರಣಗೈದು ಸಿಕ್ಕಿಬಿದ್ದ ಮಹಿಳೆ. ಈಕೆ ಅಪಹರಣ ಮಾಡಿದ್ದ 42 ದಿನಗಳ ನವಜಾತ ಶಿಶುವನ್ನು ನಿನ್ನೆ ರಕ್ಷಣೆ ಮಾಡಿದ್ದ ಪೊಲೀಸರು ಪಾಲಕರಿಗೆ ಒಪ್ಪಿಸಿದ್ದಾರೆ. ಈ ಚಾಲಕಿ ಮಹಿಳೆ ಸಿಕ್ಕಿಬಿದ್ದಿದ್ದೇ ರೋಚಕರ ಸಂಗತಿ.
ಕಲಾಸಿಪಾಳ್ಯದ ದುರ್ಗಮ್ಮ ದೇವಸ್ಥಾನ ರಸ್ತೆಯ ಶಂಭುಪಾಳ್ಯ ನಿವಾಸಿ ಫರ್ಹೀನ್ ಬೇಗಂ (27) ಎಂಬಾಕೆ ಶನಿವಾರ ಬೆಳಗ್ಗೆ 7.30ರಲ್ಲಿ ಮನೆಯಲ್ಲಿ ಮಗುವಿಗೆ ಹಾಲು ಕುಡಿಸಿ ಪಕ್ಕದಲ್ಲಿ ಮಲಗಿಸಿಕೊಂಡು ತಾನೂ ಮಲಗಿದ್ದರು. ಮನೆಗೆ ಡೋರ್ ಲಾಕ್ ಮಾಡಿರಲಿಲ್ಲ. ಈ ವೇಳೆ ಮನೆಗೆ ನುಗ್ಗಿದ ಆಯೆಷಾ ಮಗು ಮತ್ತು ಮೊಬೈಲ್ ಫೋನ್ ಎತ್ತಿಕೊಂಡು ಪರಾರಿಯಾಗಿದ್ದಳು. ತಾಯಿ ಎಚ್ಚೆತ್ತುಕೊಂಡು ನೋಡುವಾಗ ಮಗು ನಾಪತ್ತೆಯಾಗಿದೆ. ದಿಕ್ಕು ತೋಚದ ಫರ್ಹೀನ್ ಬೇಗಂ ಕಲಾಸಿಪಾಳ್ಯ ಠಾಣೆಗೆ ದೂರು ಸಲ್ಲಿಸಿದ್ದರು.
ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮಗುವಿನ ಹುಡುಕಾಟದಲ್ಲಿ ತೊಡಗಿದ್ದರು. ಮತ್ತೊಂದೆಡೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಮಾಗಡಿ ರಸ್ತೆ ರೈಲ್ವೇ ಕ್ವಾಟರ್ಸ್ ಬಳಿ ಆಯೆಷಾ ಮಗುವಿನೊಂದಿಗೆ ಅನುಮಾನಾಸ್ಪದವಾಗಿ ಅಲೆದಾಡುತ್ತಿದ್ದಳು. ಈ ಸಂದರ್ಭ ಮಗು ಜೋರಾಗಿ ಅಳುತ್ತಿತ್ತು. ಆಗ ಸ್ಥಳೀಯ ಮಹಿಳೆಯೊಬ್ಬರು 'ಮಗುವಿಗೆ ಏನು ತಿನ್ನಿಸಿದ್ರಿ?' ಎಂದು ಕೇಳಿದ್ದರು. ಆಗ ಆಯೆಷಾ ಹಾಲು-ಉಪ್ಪಿಟ್ಟು ಎಂದಿದ್ದಾಳೆ. ಅಷ್ಟು ಚಿಕ್ಕ ಮಗುವಿಗೆ ಹಾಲು-ಉಪ್ಪಿಟ್ಟು ತಿನ್ನಿಸ್ತಾರಾ? ಎಂಬ ಅನುಮಾನ ಮೂಡಿದ್ದರಿಂದ ಸ್ಥಳೀಯ ಮಹಿಳೆ ಕೂಡಲೇ 112ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮಹಿಳೆ ಮತ್ತು ಮಗುವನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಕಲಾಸಿಪಾಳ್ಯದಲ್ಲಿ ಅಪಹರಿಸಲಾಗಿದ್ದ ಮಗು ಎಂಬುದು ತಿಳಿದು ಬಂದಿದೆ. ತಕ್ಷಣ ಅಪಹರಣ ಮಾಡಿರುವಾಕೆಯನ್ನು ಬಂಧಿಸಿದ ಪೊಲೀಸರು ಮಗುವನ್ನು ಪಾಲಕರಿಗೆ ಒಪ್ಪಿಸಿದ್ದರು.