
ಮಂಗಳೂರು: ಮಲಾರ್ ಪಲ್ಲಿಯಬ್ಬ ಹತ್ಯೆ ಪ್ರಕರಣ - ಐವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ
Friday, March 3, 2023
ಮಂಗಳೂರು: ಮಲಾರ್ ಗ್ರಾಮದ ನಿವಾಸಿ ವೃದ್ಧ ಪಲ್ಲಿಯಬ್ಬ ಎಂಬವರನ್ನು ಕೊಲೆ ಮಾಡಿ ಹೂತಿಟ್ಟಿರುವ ಆರೋಪ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಆರೋಪ ಸಾಬೀತಾಗಿದ್ದು, ಐವರು ಆರೋಪಿಗಳಿಗೆ ಶಿಕ್ಷೆ ವಿಧಿಸಿ ಆದೇಶಿಸಿದೆ.
ಮಲಾರ್ ಅಕ್ಷರ ನಗರ ನಿವಾಸಿ ಹಂಝ ಅಬ್ಬಾಸ್ (44), ಮಲಾರ್ ಅರಸ್ತಾನ ಸೈಟ್ ನಿವಾಸಿ ಅಝರುದ್ದೀನ್ (27), ಸಜಿಪನಡು ಕಂಚಿನಡ್ಕಪದವು ನಿವಾಸಿಗಳಾದ ಅಮೀರ್ ಶೇಖ್ ಯಾನೆ ಅಮ್ಮಿ (26), ಅರ್ಫಾಝ್ ಅಬ್ದುಲ್ ರಝಾಕ್ (20) ಹಾಗೂ ಅಥಾವುಲ್ಲಾ ಯಾನೆ ಅಲ್ತಾಫ್ ಜೀವಾವಧಿ ಶಿಕ್ಷೆಗೊಳಗಾದ ಅಪರಾಧಿಗಳು.
ಪಾವೂರು ಗ್ರಾಮದ ನಿವಾಸಿ ಪಲ್ಲಿಯಬ್ಬ ನಾಪತ್ತೆಯಾಗಿದ್ದರೆಂದು 2020ರ ಅ.29ರಂದು ಕೊಣಾಜೆ ಠಾಣೆಯಲ್ಲಿ ಅವರ ಮನೆಯವರು ದೂರು ದಾಖಲಿಸಿದ್ದರು. ಪೊಲೀಸ್ ತನಿಖೆಯ ಬಳಿಕ ಪಲ್ಲಿಯಬ್ಬರ ಮೃತದೇಹ ಇರಾ ಗ್ರಾಮದ ಪದವು ಎಂಬಲ್ಲಿ ಹೂತಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಕೊಣಾಜೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಹಣದ ವಿಚಾರದಲ್ಲಿ ಇವರನ್ನು ವ್ಯವಸ್ಥಿತವಾಗಿ ಹತ್ಯೆಗೈದು ಹೂತು ಹಾಕಲಾಗಿತ್ತು ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿತ್ತು.
ಪ್ರಕರಣವನ್ನು ಕೈಗೆತ್ತಿಕೊಂಡ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ವಿವಾರಣೆ ನಡೆಸಿದೆ. ವಾದ - ವಿವಾದಗಳನ್ನು ಆಲಿಸಿದ ನ್ಯಾಯಾಧೀಶ ಬಸಪ್ಪ ಬಾಳಪ್ಪ ಜಕಾತಿಯವರು ಎಲ್ಲಾ ಐವರು ಆರೋಪಿಗಳು ದೋಷಿಗಳು ಎಂದು ತೀರ್ಮಾನಿಸಿ ಅವರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 20 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.
ಸರಕಾರದ ಪರವಾಗಿ ನಾರಾಯಣ ಶೇರಿಗಾರ್ ಯು. ವಾದಿಸಿದ್ದಾರೆ.