ವಿವಾಹವಾದ ಮೂರೇ ದಿನಕ್ಕೆ ನಾಪತ್ತೆಯಾದ ಪತಿರಾಯ- ಮದ್ವೆಯಾಗಿಲ್ಲ ಅನ್ನೋದಕ್ಕೆ ಆತ ಕೊಟ್ಟ ಸಾಕ್ಷಿಯನ್ನು ನೋಡಿ ಪತ್ನಿ ಶಾಕ್
ಬೆಂಗಳೂರು: ವಿವಾಹವಾದ ಮೂರೇ ದಿನಕ್ಕೆ ಯುವಕನೊಬ್ಬ ಪತ್ನಿಯನ್ನು ಬಿಟ್ಟು ಪರಾರಿಯಾಗಿದ್ದಾನೆ. ಇದೀಗ ವರಸೆ ಬದಲಿಸಿ ನಾನು ಆಕೆಯನ್ನು ಮದುವೆಯಾಗಲೇ ಇಲ್ಲ. ಆಕೆ ಕಿರುಚಿತ್ರವೊಂದರ ಫೋಟೋ ಇಟ್ಟುಕೊಂಡು ಮದುವೆಯಾಗಿರುವ ಕಥೆ ಕಟ್ಟುತ್ತಿದ್ದಾಳೆ ಎಂದು ನುಣುಚಿಕೊಳ್ಳಲು ಪ್ರಯತ್ನಿಸುತ್ತಿರುವ ಪ್ರಸಂಗ ಬೆಂಗಳೂರು ನಗರದ ಕೆ.ಆರ್.ಪುರಂನಲ್ಲಿ ಬೆಳಕಿಗೆ ಬಂದಿದೆ.
ಸಂತ್ರಸ್ತ ಯುವತಿ ಧರಣಿ ಹಾಗೂ ಸುರೇಶ್ ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರೆಂದು ಹೇಳಲಾಗುತ್ತಿದೆ. ಕಳೆದ ಫೆಬ್ರವರಿ 13ರಂದು ಸುರೇಶ್ ನೊಂದಿಗೆ ತನ್ನ ಮದುವೆಯಾಗಿದೆ ಎಂದು ಧರಣಿ ಹೇಳುತ್ತಿದ್ದಾರೆ. ನಾವಿಬ್ಬರು ಫೆ.13 ರಿಂದ ಫೆ.17 ರವರೆಗೂ ಜೊತೆಗಿದ್ದೆವು. 18 ರಂದು ತನ್ನ ಮನೆಗೆ ಕರೆದುಕೊಂಡು ಹೋಗ್ತೇನೆ ಎಂದವನು ಇದೀಗ ನಾಪತ್ತೆಯಾಗಿದ್ದಾನೆ ಎಂದು ಧರಣಿ ಆರೋಪ ಮಾಡಿದ್ದಾಳೆ.
ಅದರೆ ಇದೀಗ ಹೊಸ ವರಸೆ ತೆಗೆದಿರುವ ಸುರೇಶ್, ತಾನು ಧರಣಿಯನ್ನು ವಿವಾಹವಾಗಲೇ ಇಲ್ಲ. ಆಕೆಯೊಂದಿಗೆ ಸ್ನೇಹಿತನಾಗಿ ಮಾತ್ರ ಇದ್ದೆ. ಅವಳ ಜತೆಗಿರುವ ಮದುವೆ ಫೋಟೋಗಳು ಕಿರುಚಿತ್ರದ ಫೋಟೋಗಳು ಎನ್ನುತ್ತಿದ್ದಾನೆ.
ಅಂದಹಾಗೆ ಧರಣಿ 2016ರಲ್ಲೇ ಮೊದಲ ವಿವಾಹವಾಗಿದ್ದಾರೆ. ಆ ಬಳಿಕ ಆಕೆ ಪತಿ ಯಿಂದ ದೂರವಾಗಿದ್ದಾರೆ. ಈ ವಿಚಾರ ಸುರೇಶ್‌ಗೆ ಗೊತ್ತಿದ್ದರೂ ಮದುವೆ ಆಗಿದ್ದಾನೆ. ಈಗ ನೋಡಿದರೆ ನನ್ನನ್ನು ಬಿಟ್ಟುಹೋಗಿದ್ದಾನೆ ಎಂದು ಆರೋಪ ಮಾಡಿರುವ ಧರಣಿ, ಕೆ.ಆರ್.ಪುರಂ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.