ಮಂಗಳೂರು: ಉಡುಪಿ ಶ್ರೀಕೃಷ್ಣ ಮಠಕ್ಕೆ ಮುಸ್ಲಿಂ ರಾಜ ಜಾಗ ನೀಡಿದ್ದು - ವಿವಾದಿತ ಹೇಳಿಕೆಗೆ ಮಿಥುನ್ ರೈ ಸೃಷ್ಟೀಕರಣ
Thursday, March 9, 2023
ಮಂಗಳೂರು: ಉಡುಪಿ ಶ್ರೀಕೃಷ್ಣ ಮಠದ ಸ್ಥಾಪನೆಗೆ ಮುಸ್ಲಿಂ ರಾಜನೋರ್ವನು ಜಾಗ ನೀಡಿರುವುದೆಂಬ ತಮ್ಮ ವಿವಾದಿತ ಹೇಳಿಕೆಗೆ ಕಾಂಗ್ರೆಸ್ ಮುಖಂಡ ಮಿಥುನ್ ರೈಯವರು ಇದೀಗ ಸೃಷ್ಟೀಕರಣ ನೀಡಿ ಕ್ಷಮೆ ಯಾಚಿಸಿದ್ದಾರೆ.
ಇತ್ತೀಚೆಗೆ ಮೂಡಬಿದಿರೆಯ ಪುತ್ತಿಗೆಯ ನೂರಾನಿ ಮಸೀದಿಯಲ್ಲಿ ‘ನಮ್ಮೂರ ಮಸೀದಿ ನೋಡಬನ್ನಿ' ಎಂಬ ಕಾರ್ಯಕ್ರಮದಲ್ಲಿ ಸೌಹಾರ್ದತೆಯ ವಿಚಾರದಲ್ಲಿ ಮಿಥುನ್ ರೈಯವರು ಮಾತನಾಡಿದ್ದರು.
ಆಗ ಅವರು ಉಡುಪಿಯ ಪ್ರಸಿದ್ಧ ಶ್ರೀಕೃಷ್ಣ ಮಠ ನಿರ್ಮಾಣಕ್ಕೆ ಜಾಗ ನೀಡಿದ್ದು ಮುಸ್ಲಿಂ ರಾಜರು ಎಂದು ಹೇಳಿದ್ದರು. ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಹೇಳಿಕೆ ವಿವಾದವಾಗುತ್ತಿದ್ದಂತೆ ಪೇಜಾವರ ವಿಶ್ವಪ್ರಸನ್ನ ತೀರ್ಥರು ಮುಸ್ಲಿಂ ರಾಜ ಉಡುಪಿ ಮಠಕ್ಕೆ ಜಾಗ ನೀಡಿದ್ದಲ್ಲ, ಬದಲಾಗಿ ರಾಜ ಭೋಜ ಎಂಬವನು ನೀಡಿದ್ದು ಎಂದು ಕೂಡಾ ಹೇಳಿದ್ದರು.
ಇದೀಗ ತಮ್ಮ ಹೇಳಿಕೆಗೆ ಮಿಥುನ್ ರೈಯವರು ಸೃಷ್ಟೀಕರಣ ನೀಡಿ ಮಾತನಾಡಿ, ಉಡುಪಿ ಹಾಗೂ ದ.ಕ.ಜಿಲ್ಲೆಗಳ ಸೌಹಾರ್ದತೆಗೆ ದೊಡ್ಡ ಇತಿಹಾಸವಿದೆ. ಈ ಸೌಹಾರ್ದತೆಗೆ ಒಡಕು ತರುವ ಕಾರ್ಯವನ್ನು ಯಾರು ಮಾಡಬಾರದು. ಇಲ್ಲಿನ ಸೌಹಾರ್ದತೆಗೆ ಬೇಕಾದಷ್ಟು ಉದಾಹರಣೆಗಳಿವೆ. ಇದಕ್ಕೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಜಾಗ ಕೊಟ್ಟಿರುವುದು ಮುಸ್ಲಿಂ ರಾಜನೆಂಬ ಹೇಳಿಕೆಯು ಒಂದು. ತಾನು ಇತಿಹಾಸಕಾರನಲ್ಲ. ಜಾತಿಯ ವಿಷಬೀಜ ಬಿತ್ತಬಾರದೆಂಬ ಕಾರಣಕ್ಕೆ 10 ಉದಾಹರಣೆಗಳನ್ನು ನೀಡಿದ್ದೇನೆ. ಈ ಉದಾಹರಣೆಗೆ ಪ್ರೇರಣೆ ಹಿರಿಯ ಯತಿಗಳಾದ ವಿಶ್ವೇಶ ತೀರ್ಥರು ನೀಡಿರುವ ಹೇಳಿಕೆ. ಅದು ಮಾಧ್ಯಮದಲ್ಲಿ ಬಂದಿತ್ತು. ಆ ಹೇಳಿಕೆಯನ್ನು ನೋಡಿ ಹೇಳಿದ್ದೇನೆ. ಯಾರ ಮನಸ್ಸಿಗೆ ನೋವು ಮಾಡಲು ಹೇಳಿದ್ದಲ್ಲ. ಪರಮಪೂಜ್ಯ ಶ್ರೀಗಳ ಕ್ಷಮೆಯನ್ನು ಯಾಚಿಸುತ್ತೇನೆ. ನನ್ನ ಉದ್ದೇಶ ಇದ್ದದು ಸೌಹಾರ್ದತೆ ಕಾಪಾಡುವ ಪ್ರಾಮಾಣಿಕ ಪ್ರಯತ್ನ ಎಂದು ಹೇಳಿದ್ದಾರೆ.