ಮಂಗಳೂರು: ಮಲಾರ್ ಪಲ್ಲಿಯಬ್ಬ ಕೊಲೆ ಪ್ರಕರಣ - ಎಲ್ಲ ಐವರು ಆರೋಪಿಗಳು ದೋಷಿ ಎಂದ ನ್ಯಾಯಾಲಯ
Thursday, March 2, 2023
ಮಂಗಳೂರು: ಹಣಕ್ಕಾಗಿ ವೃದ್ಧರೊಬ್ಬರನ್ನು ಹತ್ಯೆಗೈದು ಮೃತದೇಹವನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಐವರು ಆರೋಪಿಗಳ ಮೇಲಿನ ಆರೋಪ ಸಾಬೀತಾಗಿದ್ದು, ಎಲ್ಲರನ್ನು ದೋಷಿಗಳೆಂದು ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.
ಮಲಾರ್ ಅಕ್ಷರ ನಗರ ನಿವಾಸಿ ಹಂಝ ಅಬ್ಬಾಸ್ (44), ಮಲಾರ್ ಅರಸ್ತಾನ ಸೈಟ್ ನಿವಾಸಿ ಅಝರುದ್ದೀನ್ (27), ಸಜಿಪನಡು ಕಂಚಿನಡ್ಕಪದವು ನಿವಾಸಿಗಳಾದ ಅಮೀರ್ ಶೇಖ್ ಯಾನೆ ಅಮ್ಮಿ (26), ಅರ್ಫಾಝ್ ಅಬ್ದುಲ್ ರಝಾಕ್ (20) ಹಾಗೂ ಅಥಾವುಲ್ಲ ಯಾನೆ ಅಲ್ತಾಫ್ ಅಪರಾಧಿಗಳು.
ಪಾವೂರು ಗ್ರಾಮದ ಮಲಾರ್‌ನಿಂದ ಪಲ್ಲಿಯಬ್ಬ ಯಾನೆ ಪಲ್ಲಿಯಾಕ ನಾಪತ್ತೆಯಗಿದ್ದಾರೆಂದು ಅವರ ಮನೆಯವರು 2020ರ ಅ.29ರಂದು ಕೊಣಾಜೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಬಗ್ಗೆ ಕೊಣಾಜೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಬಳಿಕ ಪಲ್ಲಿಯಬ್ಬ ಎಂಬವರ ಮೃತದೇಹವು ಇರಾ ಗ್ರಾಮದ ಪದವು ಬಳಿ ಹೂತಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಹಣದ ವಿಚಾರದಲ್ಲಿ ಇವರನ್ನು ವ್ಯವಸ್ಥಿತವಾಗಿ ಹತ್ಯೆಗೈದು ಹೂತು ಹಾಕಲಾಗಿತ್ತು ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿತ್ತು.
ಪ್ರಕರಣ ವಿಚಾರಣೆಯನ್ನು ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕೈಗೆತ್ತಿಕೊಂಡಿತು. ವಾದ - ವಿವಾದವನ್ನು ಆಲಿಸಿದ ನ್ಯಾಯಾಧೀಶ ಬಸಪ್ಪ ಬಾಳಪ್ಪ ಜಕಾತಿಯವರು ಎಲ್ಲಾ ಐವರು ಆರೋಪಿಗಳೂ ದೋಷಿಗಳೆಂದು ತೀರ್ಪು ನೀಡಿದ್ದಾರೆ. ಶಿಕ್ಷೆಯ ಪ್ರಮಾಣವನ್ನು 2023ರ ಮಾರ್ಚ್ 3ನೇ ತಾರೀಕಿಗೆ ಕಾಯ್ದಿರಿಸಿದ್ದಾರೆ.