ರಾಜಕೀಯ ಲಾಭಕ್ಕೆ ಮೋದಿ ಸರ್ಕಾರದಿಂದ ತನಿಖಾ ಸಂಸ್ಥೆಗಳ ದುರ್ಬಳಕೆ: ಸುಪ್ರೀಂ ಕೋರ್ಟ್‌ಗೆ ಪ್ರತಿಪಕ್ಷಗಳ ದೂರು
ರಾಜಕೀಯ ಲಾಭಕ್ಕೆ ಮೋದಿ ಸರ್ಕಾರದಿಂದ ತನಿಖಾ ಸಂಸ್ಥೆಗಳ ದುರ್ಬಳಕೆ: ಸುಪ್ರೀಂ ಕೋರ್ಟ್‌ಗೆ ಪ್ರತಿಪಕ್ಷಗಳ ದೂರು
ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ತನ್ನ ರಾಜಕೀಯ ಲಾಭಕ್ಕೆ ದುರುಪಯೋಗ ಮಾಡುತ್ತಿದೆ ಎಂದು ಆರೋಪಿಸಿ 14 ಪ್ರಮುಖ ಪ್ರತಿಪಕ್ಷಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿವೆ.
ಏಪ್ರಿಲ್ 5ರಂದು ಈ ಅರ್ಜಿ ವಿಚಾರಣೆಗೆ ದಿನ ನಿಗದಿಪಡಿಸಲಾಗಿದೆ. ಕೇಂದ್ರ ತನಿಖಾ ಸಂಸ್ಥೆ (CBI) ಮತ್ತು ಜ್ಯಾರಿ ನಿರ್ದೇಶನಾಲಯ (ED) ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಲಾಗಿದ್ದು, ಬಿಜೆಪಿ ವಿರೋಧಿಗಳನ್ನೇ ಗುರಿ ಮಾಡಿ ಕಾರ್ಯಾಚರಣೆ ನಡೆಸುತ್ತಿವೆ ಎಂದು ಪ್ರತಿಪಕ್ಷಗಳು ತಮ್ಮ ಅರ್ಜಿಯಲ್ಲಿ ಆರೋಪಿಸಿವೆ.
ತನಿಖಾ ಸಂಸ್ಥೆಗಳಿಂದ ದಾಳಿಗೆ ಒಳಗಾದ ರಾಜಕೀಯ ನಾಯಕರು ಒಮ್ಮೆ ಬಿಜೆಪಿ ಸೇರಿದ ಬಳಿಕ ಆ ಪ್ರಕರಣಗಳನ್ನು ಕೈಬಿಡಲಾಗುತ್ತದೆ ಇಲ್ಲವೆ ನನೆಗುದಿಗೆ ಬೀಳುತ್ತವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಆಡಳಿತ ವಿರೋಧಿ ಹಾಗೂ ಪ್ರತಿಪಕ್ಷಗಳ ಮುಖಂಡರ ಧ್ವನಿಗಳನ್ನು ಅಡಗಿಸಲು ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಲಾಗಿದೆ.
ಈ ಆರೋಪಗಳನ್ನು ಬಿಜೆಪಿ ನಿರಾಕರಿಸಿದೆ. ಕೇಂದ್ರ ತನಿಖಾ ಸಂಸ್ಥೆಗಳು ಸ್ವತಂತ್ರವಾಗಿ ತಮ್ಮ ಕಾರ್ಯ ನಿರ್ವಹಿಸುತ್ತಿವೆ ಎಂದು ಅದು ಪ್ರತಿಪಾದಿಸಿದೆ.
ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿದ ಮುಖ್ಯ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ಎರಡು ವಾರಗಳಲ್ಲಿ ಅದರ ವಿಚಾರಣೆ ನಡೆಸುವುದಾಗಿ ದಿನಾಂಕ ನಿಗದಿಪಡಿಸಿದರು.
ಕೇಂದ್ರ ತನಿಖಾ ಸಂಸ್ಥೆಗಳು ಅನುಸರಿಸಲು ಬಂಧನಪೂರ್ವ ಮತ್ತು ಬಂಧನೋತ್ತರ ಮಾರ್ಗಸೂಚಿಗಳನ್ನು ನೀಡಬೇಕು ಎಂದು ಪ್ರತಿಪಕ್ಷಗಳು ಮನವಿ ಮಾಡಿವೆ.
"ಶೇ 95ರಷ್ಟು ಪ್ರಕರಣಗಳು ವಿರೋಧ ಪಕ್ಷಗಳ ನಾಯಕರ ವಿರುದ್ಧ ದಾಖಲಾಗಿವೆ. ನಾವು ಬಂಧನಪೂರ್ವ ಮಾರ್ಗಸೂಚಿಗಳು ಮತ್ತು ಬಂಧನೋತ್ತರ ಮಾರ್ಗಸೂಚಿಗಳಿಗಾಗಿ ನಾವು ಮನವಿ ಮಾಡುತ್ತಿದ್ದೇವೆ" ಎಂದು ಸಿಂಘ್ವಿ ಹೇಳಿದರು.
ಈ ಪಕ್ಷಗಳು ಒಟ್ಟು ಮತಗಳಲ್ಲಿ ಶೇ 42ರಷ್ಟು ಮತಗಳನ್ನು ಪಡೆದುಕೊಂಡಿವೆ. ಸಿಬಿಐ ಮತ್ತು ಇಡಿಯ ದುರ್ಬಳಕೆಯು ಸಂವಿಧಾನದ ಮೂಲ ರಚನೆಯಾದ ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ಸಿಲುಕಿಸಿದೆ ಎಂದು ಅವರು ದೂರಿದರು.
ಅರ್ಜಿಯ ಜೊತೆಗೆ, 2014ರ ಮೊದಲು ಹಾಗೂ 2014ರ ನಂತರ ರಾಜಕೀಯ ಎದುರಾಳಿಗಳನ್ನು ಬಂಧಿಸಲು ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿರುವ ಅಂಕಿ ಅಂಶಗಳನ್ನು ಅರ್ಜಿದಾರರು ಸಲ್ಲಿಸಿದ್ದಾರೆ ಎಂದು ಅವರು ಹೇಳಿದರು.
ಈ ಅರ್ಜಿಗೆ ಪ್ರಧಾನ ಪ್ರತಿಪಕ್ಷ ಕಾಂಗ್ರೆಸ್, ತೃಣಮೂಲ್ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ-AAP, ಬಿಆರ್‌ಎಸ್, ಆರ್‌ಜೆಡಿ, ಎಸ್‌ಪಿ, ಶಿವಸೇನಾ(ಉದ್ದವ್ ಬಣ), ಎನ್‌ಸಿಪಿ, ಸಿಪಿಐ, ಸಿಪಿಐಎಂ, ನ್ಯಾಷನಲ್ ಕಾನ್ಫರೆನ್ಸ್, ಡಿಎಂಕೆ ಸಹಿ ಹಾಕಿವೆ.
ಈ ವಿಚಾರದಲ್ಲಿ ವಿರುದ್ಧ ದಿಕ್ಕಿನಲ್ಲಿರುವ ವಿರೋಧ ಪಕ್ಷಗಳನ್ನು ಒಂದುಗೂಡಿಸುವಲ್ಲಿ ಆಮ್ ಆದ್ಮಿ ಪಕ್ಷ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾಗಿದೆ. ದೆಹಲಿ ಉಪ ಮುಖ್ಯಮಂತ್ರಿ ಆಗಿದ್ದ ಮನೀಷ್ ಸಿಸೋಡಿಯಾ ಅವರನ್ನು ಸಿಬಿಐ ಕಳೆದ ತಿಂಗಳು ಬಂಧಿಸಿತ್ತು. ಇದಾದ ಬೆನ್ನಲ್ಲೇ ED ಕೂಡ ಅವರನ್ನು ಬಂಧಿಸಿತ್ತು.
ಕಳೆದ ವರ್ಷ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಲಾಗಿರುವ ಮಾಜಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಇನ್ನೂ ಜೈಲಿನಲ್ಲಿದ್ದಾರೆ.