ಮಂಗಳೂರು: ಸಚಿವ ಸುನೀಲ್ ಕುಮಾರ್ ವಿರುದ್ಧ ಪ್ರಮೋದ್ ಮುತಾಲಿಕ್ ತೀವ್ರ ವಾಗ್ದಾಳಿ
Monday, March 20, 2023
ಮಂಗಳೂರು: ರಾಮಮಂದಿರ ಕಟ್ಟುವುದು, ಕೇಸರಿ ಶಾಲು ಧರಿಸೋದಷ್ಟೇ ಹಿಂದುತ್ವವಲ್ಲ ಎಂದು ಇತ್ತೀಚೆಗೆ ಸಚಿವ ಸುನಿಲ್ ಕುಮಾರ್ ಟಿವಿ ಡಿಬೆಟ್ ನಲ್ಲಿ ಹಿಂದುತ್ವದ ವಿರುದ್ಧ ಹೇಳಿಕೆ ನೀಡಿದ್ದಾರೆಂದು ತೀವ್ರ ವಾಗ್ದಾಳಿ ನಡೆಸಿದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಅವರಿಗೆ ತಾವು ಕೇಸರಿ ಶಾಲು ಹಾಕಿ ದತ್ತಪೀಠ ಹೋರಾಟ ಮಾಡಿರೋದು, ಲವ್ ಜಿಹಾದ್, ಗೋಕಳ್ಳ ಸಾಗಾಟದ ವಿರುದ್ಧ ಹೋರಾಟ ಮಾಡಿರೋದು ಮರೆತು ಹೋಯ್ತೇ ಎಂದರು.
ಮಂಗಳೂರಿನ ಆರ್ಯ ಸಮಾಜ ಸಭಾಂಗಣದಲ್ಲಿ ಮಾತನಾಡಿದ ಅವರು, ಹಿಂದುತ್ವದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಸಚಿವ ಸುನೀಲ್ ಕುಮಾರ್ ಗೆ ನಾಚಿಕೆ ಮಾನ ಮರ್ಯಾದೆ ಇದೆಯೇ. ಕೇಸರಿ ಶಾಲು, ರಾಮಮಂದಿರ ನಿರ್ಮಾಣದ ಬಗ್ಗೆ ಸೊಕ್ಕಿನ ಮಾತು ಮಾತನಾಡುವ ಅವರಿಗೆ ಹಿಂದುತ್ವವೆಂದರೆ ಕೇವಲ ಭ್ರಷ್ಟಾಚಾರ ಮಾಡುವುದು, ಅಧಿಕಾರದ ದರ್ಪ ತೋರಿಸುವುದಷ್ಟೇ ಮಾತ್ರವೇ ಎಂದು ಪ್ರಶ್ನಿಸಿದರು.
ಸುನೀಲ್ ಕುಮಾರ್ ಈಗಿರುವ ಸ್ಥಾನಕ್ಕೆ ಹಿಂದುತ್ವ ಹಾಗೂ ಕೇಸರಿ ಶಾಲೇ ಕಾರಣ. ಹಿಂದುತ್ವದ ಅಸ್ತಿತ್ವ, ಅಸ್ಮಿತೆ ಉಳಿಸುವ ಕಾರಣಕ್ಕೆ ರಾಮಮಂದಿರವನ್ನು ಕಟ್ಟಲಾಗಿದೆ. ಈ ಮಂದಿರ ನಿರ್ಮಾಣಕ್ಕೆ ಯುದ್ಧ, ಬಲಿದಾನ, ಜೈಲು, ಲಾಠಿಚಾರ್ಜ್ ಗಳಾಯಿತು. ರಾಮಮಂದಿರ ಎಂಬುದು ಹಿಂದುತ್ವದ ಪ್ರತೀಕ, ವಿಜಯದ ಪತಾಕೆ ಎನ್ನುವುದು ಸುನಿಲ್ ಕುಮಾರ್ ಅವರಿಗೆ ಮರೆತು ಹೋಗಿದೆ. ಅವರು ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ. ಈ ಹೇಳಿಕೆಯನ್ನು ತಕ್ಷಣ ವಾಪಾಸ್ ತೆಗೆದುಕೊಳ್ಳಬೇಕು. ತಕ್ಷಣ ಅವರು ಕ್ಷಮೆ ಕೇಳಬೇಕೆಂದು ಪ್ರಮೋದ್ ಮೊತಾಲಿಕ್ ಆಗ್ರಹಿಸಿದರು.
ಉಡುಪಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಗೋಕಳವು ಕಾರ್ಕಳದಲ್ಲಿ ಆಗಿದೆ. ಹಿಂದೂ ಸಂಘಟನೆಗಳ 300ಕ್ಕೂ ಅಧಿಕ ಕಾರ್ಯಕರ್ತರ ಮೇಲಿರು ಕೇಸ್ ಗಳನ್ನು, ಇನ್ನೂ ಕೇಸ್ ಹಿಂದೆತೆಗದುಕೊಂಡಿಲ್ಲ. 26 ಕಾರ್ಯಕರ್ತರ ಮೇಲಿರುವ ಗೂಂಡಾ ಕಾಯ್ದೆಯನ್ನು ಹಿಂದೆ ತೆಗೆದುಕೊಂಡಿಲ್ಲ. ಆದ್ದರಿಂದ ಕಾರ್ಕಳದಲ್ಲಿ ತಾನು ಅಧಿಕಾರ ಹಿಡಿದು ಇದನ್ನೆಲ್ಲಾ ಸರಿಪಡಿಸಲು ನಿರ್ಧರಿಸಿದ್ದೇನೆ. ನಾಳೆ ಉಡುಪಿಯಲ್ಲಿ ನಡೆಸುವ ಪತ್ರಿಕಾಗೋಷ್ಠಿಯಲ್ಲಿ ಸುನೀಲ್ ಕುಮಾರ್ ಬ್ರಹ್ಮಾಂಡ ಭ್ರಷ್ಟಾಚಾರದ ಮೂರನೇ ಭಾಗವನ್ನು ಬಹಿರಂಗಪಡಿಸುತ್ತೇನೆ ಎಂದರು.