
ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥನ ಮುಂಭಾಗ ಹಾಡು ಹಾಡಿದ 'ವರಾಹರೂಪಂ' ಖ್ಯಾತಿಯ ಸಾಯಿ ವಿಘ್ನೇಶ್
Saturday, March 11, 2023
ಮಂಗಳೂರು: ದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿಯೂ ಸದ್ದು ಮಾಡಿರುವ ಕಾಂತಾರ ಸಿನಿಮಾವು ಕನ್ನಡ ಸಿನಿಮಾ ಇತಿಹಾಸದಲ್ಲಿ ಮೈಲುಗಲ್ಲಾಗಿ ರಾರಾಜಿಸಿತ್ತು. ಈ ಸಿನಿಮಾದ 'ವರಾಹರೂಪಂ' ಹಾಡು ಎಲ್ಲರ ಮೊಬೈಲ್ ರಿಂಗ್ ಟೋನ್ ಆಗಿ ರಾರಾಜಿಸಿತ್ತು. ಎಲ್ಲೆಲ್ಲೂ ಈ ಹಾಡಿನ ಗುಂಗೇ ಅನುರಣಿಸುತ್ತಿತ್ತು. ಇತ್ತೀಚೆಗೆ ಈ ಹಾಡನ್ನು ಹಾಡಿರುವ ಗಾಯಕ ಸಾಯಿ ವಿಘ್ನೇಶ್ ಮಂಗಳೂರಿಗೆ ಆಗಮಿಸಿದ್ದ ವೇಳೆ ಕುದ್ರೋಳಿ ಶ್ರೀ ಗೋಕರ್ಣನಾಥ ದೇವರ ಮುಂಭಾಗ ಹಾಡನ್ನು ಹಾಡಿ ಎಲ್ಕರನ್ನು ರಂಜಿಸಿದ್ದರು.
ಹೌದು .. 'ವರಾಹರೂಪಂ' ಹಾಡನ್ನು ಸೊಗಸಾಗಿ ಹಾಡಿ ಖ್ಯಾತರಾಗಿರುವ ಸಾಯಿ ವಿಘ್ನೇಶ್ ಕಾರ್ಯಕ್ರಮವೊಂದರ ನಿಮಿತ್ತ ಇತ್ತೀಚೆಗೆ ಮಂಗಳೂರಿಗೆ ಬಂದಿದ್ದರು. ಈ ವೇಳೆ ಅವರು ಶ್ರೀಕ್ಷೇತ್ರ ಕುದ್ರೋಳಿಗೆ ಭೇಟಿ ನೀಡಿದ್ದರು. ದೇವಸ್ಥಾನದಲ್ಲಿ ದೇವರ ದರ್ಶನ ಪಡೆದ ಅವರು ಶ್ರೀ ಗೋಕರ್ಣನಾಥ ದೇವರ ಮುಂಭಾಗ 'ಶಂಭೋ ಶಿವ ಶಂಭೋ' ಹಾಡನ್ನು ಹಾಡಿ ಗಾನಾರ್ಚನೆ ಮಾಡಿದರು. ಇದರ ವೀಡಿಯೋ ಈಗ ವೈರಲ್ ಆಗುತ್ತಿದೆ.
ಈ ಸಂದರ್ಭ 'ವರಾಹರೂಪಂ' ಹಾಡಿನ ಸಾಹಿತ್ಯ ರಚಿಸಿರುವ ಶಶಿರಾಜ್ ರಾವ್ ಕಾವೂರು, ಕಾಂತಾರ ಸಿನಿಮಾಕ್ಕೆ ದುಡಿದ ಕಲಾವಿದ ಮೈಮ್ ರಾಮದಾಸ್, ಕುದ್ರೋಳಿ ಶ್ರೀಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ದೇವಸ್ಥಾನದ ಅರ್ಚಕರು ಉಪಸ್ಥಿತರಿದ್ದರು.