ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಆರೋಪದಲ್ಲಿ ತರಬೇತಿಯಲ್ಲಿದ್ದ ಮಹಿಳಾ ಎಸ್ಐ ಅರೆಸ್ಟ್
Sunday, March 5, 2023
ಚಂಡೀಗಢ: ತರಬೇತಿಯಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಯನ್ನು ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ದಿಲ್ಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ನೈನಾ ಕನ್ವಾಲ್ ಎಂಬ ಟ್ರೈನಿ ಎಸ್‌ಐ ರಾಜಸ್ಥಾನದಲ್ಲಿ ಕರ್ತವ್ಯದಲ್ಲಿದ್ದರು. ಅಪಹರಣ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಸುಮಿತ್ ನಂದಲ್ ಎಂಬ ಆರೋಪಿಯ ಹುಡುಕಾಟಕ್ಕೆ ಇತ್ತೀಚೆಗೆ ನೈನಾ ಕನ್ವಾಲ್ ರವರ ರೋಹ್ಟಕ್ ಫ್ಲ್ಯಾಟ್‌ವೊಂದಕ್ಕೆ ದಿಲ್ಲಿ ಪೊಲೀಸರು ಹರಿಯಾಣ ಪೊಲೀಸರ ಸಹಕಾರದೊಂದಿಗೆ ದಾಳಿ ನಡೆಸಿದ್ದಾರೆ. ಈ ವೇಳೆ ಫ್ಲ್ಯಾಟ್ ನಲ್ಲಿದ್ದ ನೈನಾ ಕನ್ವಾಲ್ ಕೈಯಲ್ಲಿ ಪೊಲೀಸರು ಎರಡು ಪಿಸ್ತೂಲ್ ಗಳನ್ನು ಕಂಡಿದ್ದಾರೆ. ಪೊಲೀಸರನ್ನು ನೋಡಿದ ಆಕೆ ತಮ್ಮ ಕೈಯಲ್ಲಿದ್ದ ಪಿಸ್ತೂಲ್ ಗಳನ್ನು ಎಸೆಯಲು ಯತ್ನಿಸಿದ್ದಾರೆ. ಅನುಮಾನಗೊಂಡು ಪೊಲೀಸರು ಆಕೆಯನ್ನು ವಿಚಾರಿಸಿದ್ದಾರೆ.
ಆಗ ಅವರು ತರಬೇತಿಯಲ್ಲಿದ್ದ ರಾಜಸ್ಥಾನದ ಮಹಿಳಾ ಎಸ್ಐ ಎನ್ನುವುದು ತಿಳಿದಿದೆ. ಇದೀಗ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಆರೋಪದ ಮೇಲೆ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ನೈನಾ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ. ಅಲ್ಲದೆ ಆಕೆಯನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ. ಲೈಸೆನ್ಸ್ ಇಲ್ಲದೆ ಇಟ್ಟುಕೊಂಡಿದ್ದ ಎರಡು ಪಿಸ್ತೂಲ್ ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ನೈನಾ ಕನ್ವಾಲ್ ಕ್ರೀಡಾ ಕೋಟದಡಿಯಲ್ಲಿ ಪೊಲೀಸ್ ಹುದ್ದೆಯನ್ನು ಪಡೆದುಕೊಂಡಿದ್ದು, ಅಂತರಾಷ್ಟ್ರೀಯ ಕುಸ್ತಿಪಟು ಆಗಿದ್ದಾರೆ. ಅನೇಕ ಕುಸ್ತಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರು ಅಪಾರ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.