ಉಳ್ಳಾಲ: ವಾಮಾಚಾರ ಶಂಕೆ - ಸಂಬಂಧಿಕರ ಅಂಗಳದಲ್ಲಿಯೇ ಪೆಟ್ರೊಲ್ ಸುರಿದು ಆತ್ಮಹತ್ಯೆ
ಉಳ್ಳಾಲ: ಯುವಕರೋರ್ವರು ಸಂಬಂಧಿಕರ ಮನೆಯಂಗಳದಲ್ಲಿ ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ಮುಚ್ಚಿಲಕೋಡಿ ಎಂಬಲ್ಲಿ ಸಂಭವಿಸಿದೆ.
ವಿಟ್ಲ ಕನ್ಯಾನ ನಿವಾಸಿ ಹರೀಶ್ (33) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಹರೀಶ್ ಕಳೆದ 10 ವರ್ಷಗಳಿಂದ ಮುಡಿಪುವಿನ ಇನ್ಫೋಸಿಸ್ ಸಂಸ್ಥೆಯಲ್ಲಿ ಸೆಕ್ಯುರಿಟಿ ಕೆಲಸ ನಿರ್ವಹಿಸುತ್ತಿದ್ದರು. ಕಳೆದ ವರ್ಷ ಹರೀಶ್ ಅವರಿಗೆ ಸಿದ್ದಕಟ್ಟೆ ಸಂಗಬೆಟ್ಟುವಿನ ಯುವತಿಯೊಂದಿಗೆ ವಿವಾಹವಾಗಿತ್ತು. ಇದೀಗ ಅವರು 7 ತಿಂಗಳ ಗರ್ಭಿಣಿಯಾಗಿದ್ದಾರೆ.
ಮಾ.12ರಂದು ಹರೀಶ್ ಅವರು ತಮ್ಮ ದೊಡ್ಡಮ್ಮನ ಪುತ್ರ ಕೊಣಾಜೆ ಮುಚ್ಚಿಲಕೋಡಿ ನಿವಾಸಿ ರಮೇಶ್ ಶೆಟ್ಟಿಗಾರ್ ಎಂಬವರಿಗೆ ಕರೆ ಮಾಡಿ ತಮ್ಮ ಬ್ಯಾಗಿನಲ್ಲಿ ಭಸ್ಮ ತಗಡು ದೊರೆತಿದ್ದು, ಯಾರೋ ವಾಮಾಚಾರ ಮಾಡಿರುವ ಶಂಕೆಯಿದೆ ಎಂಬ ಆತಂಕ ವ್ಯಕ್ತಪಡಿಸಿದ್ದರು. ಆದ್ದರಿಂದ ರಮೇಶ್ ಶೆಟ್ಟಿಗಾರ್ ಮಾ.19ರ ಭಾನುವಾರ ಮನೆಗೆ ಬಂದು ಮಾತನಾಡು ಎಂದು ತಿಳಿಸಿದ್ದರು. ಅದರಂತೆ ಹರೀಶ್ ಅವರು ಮಾತುಕತೆಗೆ ಅವರ ಬಂದಿದ್ದರು.
ಆದರೆ ಬರುವಾಗಲೇ ಹರೀಶ್ ಪೆಟ್ರೋಲ್ ಕ್ಯಾನ್ ತಂದಿದ್ದಾರೆ. ಮಾತುಕತೆ ಆರಂಭಕ್ಕೆ ಮುನ್ನವೇ ಅಂಗಳದಲ್ಲಿ ಮೈಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮನೆಮಂದಿ ಗಾಬರಿಗೊಂಡು ಕೊಣಾಜೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊಣಾಜೆ ಪೊಲೀಸರು ತಕ್ಷಣ ಘಟನಾ ಸ್ಥಳಕ್ಕಾಗಮಿಸಿ, ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ.ಆದರೆ ಗಂಭೀರವಾಗಿ ಗಾಯಗೊಂಡ ಹರೀಶ್ ಆಸ್ಪತ್ರೆಗೆ ಹೋಗುವ ಮುನ್ನವೇ ಸಾವನ್ನಪ್ಪಿದ್ದಾರೆ.
ಕೊಣಾಜೆ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಆರ್ಥಿಕವಾಗಿ ಯಾವುದೇ ರೀತಿಯ ಸಂಕಷ್ಟ ಇಲ್ಲದ ಹರೀಶ್, ಇದೇ ತಿಂಗಳ ಒಳಗೆ ಪತ್ನಿಗೆ ಸೀಮಂತ ಮಾಡುವವರಿದ್ದರು.