ಸಂತ್ರಸ್ತ ತುಂಬೆ ರೈತರಿಗೆ ಪರಿಹಾರ ನೀಡಲು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಆಗ್ರಹ
ಸಂತ್ರಸ್ತ ತುಂಬೆ ರೈತರಿಗೆ ಪರಿಹಾರ ನೀಡಲು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಆಗ್ರಹ
ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದಲ್ಲಿರುವ ಮಂಗಳೂರು ಮಂಗಳೂರಿಗೆ ನೀರು ಸರಬರಾಜಾಗುವ ಮಹಾನಗರ ಪಾಲಿಕೆಯ ಶುದ್ಧೀಕರಣ ಘಟಕದಿಂದ ವ್ಯಾಪಕ ಕೃಷಿ ನಾಶವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆ ಆಕ್ರೋಶ ವ್ಯಕ್ತಪಡಿಸಿದೆ.
ಶುದ್ಧೀಕರಣ ಘಟಕದಿಂದ ರಭಸದಿಂದ ಚಿಮ್ಮುವ ಕಲುಷಿತ ನೀರು ಹರಿದು ಸ್ಥಳೀಯ ರೈತರ ಕೃಷಿ ಭೂಮಿಯನ್ನು ಹಾಳು ಮಾಡಿದೆ. ದಿಲೀಪ್ ರೈ, ಸಂಜೀವ ಪೂಜಾರಿ, ಶೇಖರ್ ಪೂಜಾರಿ ಮೊದಲಾದವರ ಕೃಷಿ ಜಮೀನು ನಾಶವಾಗಿದೆ. ಇದನ್ನು ಮಂಗಳೂರು ಮಹಾನಗರ ಪಾಲಿಕೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕೊನೆಗೆ 2015ರಲ್ಲಿ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ ಪರಿಣಾಮ ಬಳಿಕ ಪರಿಹಾರ ಘೋಷಣೆಯಾಯಿತು.
ಆ ಆದೇಶದಲ್ಲಿ ಮಾನ್ಯ ನ್ಯಾಯಾಲಯ, ಭೂಮಿಯನ್ನು ಯಥಾಸ್ಥಿತಿಗೆ ತರುವಂತೆ ಆದೇಶಿಸಿದ್ದರೂ ಮಂಗಳೂರು ಮಹಾನಗರ ಪಾಲಿಕೆ ಆದೇಶ ಪಾಲನೆ ಮಾಡದೆ ನ್ಯಾಯಾಂಗ ನಿಂದನೆ ಮಾಡಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ಆರೋಪಿಸಿದರು.
ಈ ಬಗ್ಗೆ ಹೈಕೋರ್ಟ್ ನ್ಯಾಯಪೀಠದ ಮುಂದೆ ಮತ್ತೊಂದು ಅಪೀಲು ಸಲ್ಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸದ್ರಿ ಆ ಪ್ರದೇಶದಲ್ಲಿ ಸ್ಥಾಪಿಸಲಾದ ತುಂಬೆ ಕಿಂಡಿ ಅಣೆಕಟ್ಟಿನಿಂದ ಹೊರಬರುವ ನೀರಿನ ರಭಸಕ್ಕೆ ತುಂಬೆ ಗ್ರಾಮದ ರೈತರಾದ ಮೊದೀನ್, ಲೋಕಯ್ಯ, ಪುರುಷೊತ್ತಮ, ಭಾಸ್ಕರ, ಗಂಗಾಧರ, ರಮೇಶ್ ಭಂಡಾರಿ, ಆನಂದ ಶೆಟ್ಟಿ, ದೇವಕಿ ಮೊದಲಾದವರ ಕೃಷಿ ಭೂಮಿ ಹಾಳಾಗಿದೆ.
ಪಾಲಿಕೆಗೆ, ಸ್ಥಳೀಯ ಶಾಸಕ ಯು.ಟಿ.ಖಾದರ್ ಅವರಿಗೆ ದೂರು ನೀಡಲಾಗಿದ್ದು ಎಲ್ಲಾ ಪ್ರಯತ್ನಗಳು ವಿಫಲವಾದಾಗ ನ್ಯಾಯಕ್ಕಾಗಿ ಉಚ್ಛನ್ಯಾಯಾಲದಲ್ಲಿ ದಾವೆ ಹೂಡಲಾಗಿದೆ.
ಈ ಹಿನ್ನೆಲೆಯಲ್ಲಿ ಕೃಷಿಕರಾದ ದಿಲೀಪ ರೈ ಹಾಗೂ ಇತರರ ಕೃಷಿ ಭೂಮಿಯನ್ನು ಹೈಕೋರ್ಟ್ ಆದೇಶದಂತೆ ಸುಸ್ಥಿತಿಗೆ ಮರಳಿಸಬೇಕು ಹಾಗೂ ತುಂಬೆ ಡ್ಯಾಂನಿಂದ ಸಂತೃಸ್ತರಾದ 8 ಜನ ಕೃಷಿಕರಿಗೆ ಸೇರಿದ ನೀರು ಪಾಲಾದ ಭೂಮಿಗೆ ಸಮರ್ಪಕ ಪರಿಹಾರ ನೀಡಬೇಕು ಹಾಗೂ ಉಳಿದ ಪ್ರದೇಶಕ್ಕೆ ತಡೆಗೋಡೆ ನಿರ್ಮಿಸಿ ಉಳಿದ ಭೂಮಿ ರಕ್ಷಿಸಬೇಕು ಎಂದು ಅವರು ಮನವಿ ಮಾಡಿದರು.