ಚುನಾವಣಾ ಅಭ್ಯರ್ಥಿಯಾಗಿ ಘೋಷಣೆ ಬಳಿಕ ಉಳ್ಳಾಲಕ್ಕೆ ರಿಯಾಝ್ ಫರಂಗಿಪೇಟೆ ಮೊದಲ ಬಾರಿಗೆ ಎಂಟ್ರಿ: ಅದ್ದೂರಿ ಸ್ವಾಗತ
Saturday, March 4, 2023
ಉಳ್ಳಾಲ : ಎಸ್ ಡಿಪಿಐ ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ 'ನೀ ತಾಂಟ್ರೆ... ಬಾ ತಾಂಟ್..' ಖ್ಯಾತಿಯ ರಿಯಾಝ್ ಫರಂಗಿಪೇಟೆಯವರು ಉಳ್ಳಾಲಕ್ಕೆ ಮೊದಲ ಬಾರಿ ಎಂಟ್ರಿ ನೀಡಿದ್ದಾರೆ. ರ್ಯಾಲಿ ಮೂಲಕ ಕರೆತರಲು ಪೊಲೀಸರು ಅವಕಾಶ ನೀಡದಿದ್ದರೂ ಪಕ್ಷದ ಕಾರ್ಯಕರ್ತರು ತಮ್ಮ ನೆಚ್ಚಿನ ಅಭ್ಯರ್ಥಿಗೆ ಅದ್ದೂರಿ ಸ್ವಾಗತ ನೀಡಿದ್ದಾರೆ.
ಅಭ್ಯರ್ಥಿಯಾಗಿ ಘೋಷಣೆಯ ಬಳಿಕ ರಿಯಾಝ್ ಫರಂಗಿಪೇಟೆ ಶುಕ್ರವಾರ ಮೊದಲ ಬಾರಿಗೆ ಉಳ್ಳಾಲಕ್ಕೆ ಆಗಮಿಸಿದ್ದಾರೆ. ಈ ವೇಳೆ ಕಾರ್ಯಕರ್ತರು ಕಲ್ಲಾಪಿನಿಂದ ಉಳ್ಳಾಲದವರೆಗೆ ರಿಯಾಝ್ ಫರಂಗಿಪೇಟೆಯವರನ್ನು ರ್ಯಾಲಿಯಲ್ಲಿ ಕರೆದೊಯ್ಯಲು ಯೋಜನೆ ರೂಪಿಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಪೊಲೀಸ್ ಇಲಾಖೆ ರ್ಯಾಲಿಗೆ ಅನುಮತಿ ನಿರಾಕರಿಸಿದ್ದಾರೆ. ಆದ್ದರಿಂದ ಅಭ್ಯರ್ಥಿಗೆ ಎಸ್ ಡಿಪಿಐ ಕಾರ್ಯಕರ್ತರು ಉಳ್ಳಾಲದಲ್ಲಿ ಅದ್ಧೂರಿ ಸ್ವಾಗತ ನೀಡಿದ್ದಾರೆ. ಉಳ್ಳಾಲದ ಅಬ್ಬಕ್ಕ ವೃತ್ತದಿಂದ ಕಾರ್ಯಕರ್ತರು ರಿಯಾಝ್ ಪರಂಗಿಪೇಟೆಯನ್ನು ಅದ್ಧೂರಿ ಸ್ವಾಗತ ಕೋರಿ ನಗರಸಭೆ ಕಚೇರಿ ಮುಂಭಾಗದ ಪಕ್ಷದ ಕಚೇರಿಗೆ ಬರಮಾಡಿಕೊಂಡರು.
ಈ ವೇಳೆ ರಿಯಾಝ್ ಪರಂಗಿಪೇಟೆಯವರು ಮಾತನಾಡಿ, ಮಂಗಳೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಅವಕಾಶ ಕಲ್ಪಿಸಿದ ಪಕ್ಷದ ಎಲ್ಲಾ ನಾಯಕರು, ತಳಮಟ್ಟದಲ್ಲಿ ಹೆಸರು ಸೂಚಿಸಿದ ಕಾರ್ಯಕರ್ತರುಗಳಿಗೆ ಕೃತಜ್ಞತೆಗಳು. ಬೇರೆ ಪಕ್ಷದವರಿಗೆ ಚುನಾವಣೆ ಅಂದರೆ ಪ್ರತಿಷ್ಠೆ, ಸ್ಪರ್ಧೆ, ವ್ಯಾಪಾರ, ಸಂಪತ್ತು ಏರಿಕೆ ಮಾಡುವ ವ್ಯವಸ್ಥೆ ಸಂವಿಧಾನದ ಆಶಯದ ಜತೆಗೆ ಆಟವಾಡುವ ವಸ್ತುವಾಗಿರಬಹುದು. ಆದರೆ ನಮಗೆ ಚುನಾವಣೆ ಅಂದರೆ ಪ್ರತಿಷ್ಠೆಯಲ್ಲ. ಶೋಷಿತ ಸಮುದಾಯ, ಅನ್ಯಾಯ, ಅಕ್ರಮಕ್ಕೆ ಒಳಗಾದವರಿಗೆ ಸಾಮಾಜಿಕ ನ್ಯಾಯ ತೆಗೆಸಿಕೊಡಲು ರಾತ್ರಿ ದುಡಿಯುವ ವೇದಿಕೆಯಾಗಿದೆ. ನಮ್ಮ ಸ್ಪರ್ಧೆ ಫ್ಯಾಸಿಸ್ಟ್ ಮನಸ್ಥಿತಿ ಮತ್ತು ತಾರತಮ್ಯ ನೀತಿಯ ವಿರುದ್ಧವೇ ಹೊರತು ಯಾವುದೇ ವ್ಯಕ್ತಿಯ ವಿರುದ್ಧವಲ್ಲ ಎಂದರು.