ಮಂಗಳೂರು: ಮಳಲಿ ಮಸೀದಿ v/s ಮಂದಿರ ವಿವಾದ ಪ್ರಕರಣ: ರಾಮಾಂಜನೇಯ ಭಜನಾ ಮಂದಿರದಲ್ಲಿ ಗಣಯಾಗ
Thursday, March 16, 2023
ಮಂಗಳೂರು: ನಗರದ ಮಳಲಿ ಮಸೀದಿ v/s ಮಂದಿರ ವಿವಾದ ಪ್ರಕರಣದ ಹಿನ್ನೆಲೆಯಲ್ಲಿ ತಾಂಬೂಲ ಪ್ರಶ್ನಾಚಿಂತನೆಯಲ್ಲಿ ತಿಳಿದು ಬಂದಂತೆ ಹಿಂದೂ ಸಂಘಟನೆಗಳು ಇತ್ತೀಚೆಗೆ ಶೀಘ್ರ ಮಂದಿರ ನಿರ್ಮಾಣಕ್ಕೆ ಮಳಲಿಯಲ್ಲಿರುವ ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ಗಣಯಾಗವನ್ನು ನೆರವೇರಿಸಿದೆ.
ಕಳೆದ ವರ್ಷ ಮಳಲಿಯಲ್ಲಿರುವ ಜುಮ್ಮಾ ಮಸೀದಿಯ ನವೀಕರಣದ ವೇಳೆಗೆ ಹಿಂದೂ ದೇವಾಲಯ ಶೈಲಿಯ ಕಟ್ಟಡವೊಂದು ಪತ್ತೆಯಾಗಿತ್ತು. ವಿಚಾರ ತಿಳಿದು ಬರುತ್ತಿದ್ದಂತೆ ಹಿಂದೂ ಸಂಘಟನೆಗಳು ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದೆ. ಆದ್ದರಿಂದ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಅಲ್ಲದೆ ಹಿಂದೂ ಸಂಘಟನೆಗಳು ಮಸೀದಿಯ ಮೂಲ ಶೋಧನೆ ಮಾಡಲು ಮಳಲಿಯ ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ 2022ರ ಮೇಯಲ್ಲಿ ತಾಂಬೂಲ ಪ್ರಶ್ನಾ ಚಿಂತನೆಯನ್ನು ಇಟ್ಟಿತ್ತು. ಈ ವೇಳೆ ವರ್ಷದೊಳಗೆ ಗಣಯಾಗ ನಡೆಸುವಂತೆ ತಾಂಬೂಲ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಿತ್ತು.
ಅದರಂತೆ 2023ರ ಮಾರ್ಚ್ 14ರಂದು ಈ ಗಣಯಾಗ ನಡೆದಿತ್ತು. ಈ ಗಣಯಾಗದಲ್ಲಿ ಶಾಸಕ ಡಾ.ವೈ.ಭರತ್ ಶೆಟ್ಟಿ, ವಿ ಎಚ್ ಪಿ ಮುಖಂಡ ಶರಣ್ ಪಂಪ್ ವೆಲ್ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದಾರೆ. ತಾಂಬೂಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಈ ಗಣಯಾಗಕ್ಕೆ ಮಳಲಿ ಮಸೀದಿ ಪ್ರದೇಶದ ಮಣ್ಣನ್ನು ಸಮರ್ಪಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಈ ಗಣಯಾಗ ನಡೆಸುವ ವೇಳೆ ಗೌಪ್ಯತೆ ಕಾಪಾಡುವ ಹಿನ್ನೆಲೆಯಲ್ಲಿ ಹೆಚ್ಚು ಪ್ರಚಾರ ಮಾಡಲಾಗಿಲ್ಲ ಎಂದು ತಿಳಿದು ಬಂದಿದೆ.