ಯೂಟ್ಯೂಬ್ ನೋಡಿಕೊಂಡು ಹೆರಿಗೆ: ಶಿಶುವನ್ನು ಹತ್ಯೆ ಮಾಡಿದ ಅಪ್ರಾಪ್ತೆ
Monday, March 6, 2023
ನಾಗ್ಪುರ: ಶಂಕಿತ ಲೈಂಗಿಕ ಶೋಷಣೆಗೊಳಗಾದ ಅಪ್ರಾಪ್ತ ಬಾಲಕಿಯೊಬ್ಬಳು ಯೂಟ್ಯೂಬ್‌ನಲ್ಲಿ ವೀಡಿಯೋ ನೋಡಿ ಮನೆಯಲ್ಲೇ ಹೆರಿಗೆ ಮಾಡಿಕೊಂಡಿದ್ದು, ನವಜಾತ ಶಿಶುವನ್ನು ಹತ್ಯೆ ಮಾಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ವ್ಯಕ್ತಿಯೊಬ್ಬನಿಂದ 15 ವರ್ಷದ ಅಂಬಝರಿ ಪ್ರದೇಶದ ನಿವಾಸಿ ಬಾಲಕಿ ಲೈಂಗಿಕ ಶೋಷಣೆಗೆ ಒಳಗಾಗಿದ್ದಾಳೆ. ತನಗೆ ಆರೋಗ್ಯ ಸಮಸ್ಯೆಯಿದೆ ಎಂದು ತಾಯಿಗೆ ಹೇಳಿ, ತಾನು ಗರ್ಭಿಣಿಯಾಗಿರುವ ವಿಚಾರವನ್ನು ಮುಚ್ಚಿಟ್ಟಿದ್ದಳು ಎಂದು ಪೊಲೀಸ್ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಆದರೆ ಈಕೆ ತಾನು ಗರ್ಭಿಣಿಯಾಗಿರುವ ರಹಸ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ಮನೆಯಲ್ಲೇ ಯೂ ಟ್ಯೂಬ್ ನೋಡಿ ಹೆರಿಗೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಳು. ಮಾರ್ಚ್ 2ರಂದು ಆಕೆ ಹೆಣ್ಣುಮಗುವಿಗೆ ಜನ್ಮನೀಡಿದ್ದಾಳೆ. ಆ ಬಳಿಕ ಆಕೆ ನವಜಾತ ಶಿಶುವನ್ನು ಉಸಿರುಗಟ್ಟಿಸಿ ಕೊಂದಿದ್ದಾಳೆ. ಮನೆಯಲ್ಲಿ ಪೆಟ್ಟಿಗೆಯೊಂದರಲ್ಲಿ ಶಿಶುವಿನ ಶವವನ್ನು ಹುದುಗಿಸಿ ಇಟ್ಟಿದ್ದಳು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ತಾಯಿ ಅನುಮಾನಗೊಂಡು ಆಕೆಯ ಆರೋಗ್ಯದ ಬಗ್ಗೆ ಕೂಲಂಕಷವಾಗಿ ವಿಚಾರಿಸಿದ್ದಾಳೆ. ಆಗ ಬಾಲಕಿ ಎಲ್ಲ ವಿಚಾರವನ್ನು ಹೇಳಿಕೊಂಡಿದ್ದಾಳೆ. ಆ ಬಳಿಕ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ನವಜಾತ ಶಿಶುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.