-->
ಕೊಲೆ ಪ್ರಕರಣದಲ್ಲಿ ಕಸ್ಟಡಿಯಿಂದ ತಪ್ಪಿಸಿಕೊಂಡಾತ 17 ವರ್ಷದ ಬಳಿಕ ಮಂಗಳೂರಿನಲ್ಲಿ ಮನೆ ಕಳ್ಳತನ ಪ್ರಕರಣದಲ್ಲಿ ಅರೆಸ್ಟ್

ಕೊಲೆ ಪ್ರಕರಣದಲ್ಲಿ ಕಸ್ಟಡಿಯಿಂದ ತಪ್ಪಿಸಿಕೊಂಡಾತ 17 ವರ್ಷದ ಬಳಿಕ ಮಂಗಳೂರಿನಲ್ಲಿ ಮನೆ ಕಳ್ಳತನ ಪ್ರಕರಣದಲ್ಲಿ ಅರೆಸ್ಟ್


ಮಂಗಳೂರು: 2005 ರಲ್ಲಿ ಮೈಸೂರಿನಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಪೊಲೀಸರ ಕಸ್ಟಡಿಯಿಂದ ತಪ್ಪಿಸಿಕೊಂಡಾತ 17 ವರ್ಷಗಳ ಬಳಿಕ ಮನೆ ಕಳ್ಳತನ ಪ್ರಕರಣದಲ್ಲಿ ಮಂಗಳೂರಿನ  ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ಹೂಟಗಳ್ಳಿಯ  ಮಾರಿಗುಡಿ ದೇವಸ್ಥಾನ ರಸ್ತೆಯ ನಿವಾಸಿಯಾಗಿದ್ದು ಸದ್ಯ  ಚಿಕ್ಕಬಾಣಾವರ, ಬೆಂಗಳೂರಿನಲ್ಲಿ ವಾಸವಾಗಿರುವ ಸಿದ್ಧರಾಜು ಯಾನೆ ಮೂರ್ತಿ ಯಾನೆ ಸೋನು ರಾಜ್ ಯಾನೆ ಸುಂದರ್ ರಾಜ್ ಯಾನೆ ಸಿದ್ಧ ಯಾನೆ ರೌಡಿ ಸಿದ್ದ ಯಾನೆ ಸಿದ್ದು ಯಾನೆ ಜ್ಞಾನಮೂರ್ತಿ ( 52) ಬಂಧಿತ ಆರೋಪಿ.  

ಈತ ಮಂಗಳೂರು ನಗರದ ಕಾವೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನದ ಮತ್ತು ಉಡುಪಿ ಜಿಲ್ಲೆಯ ಮಣಿಪಾಲ, ಕಾರ್ಕಳ, ಶಿವಮೊಗ್ಗ ಜಿಲ್ಲೆಯ ಆಗುಂಬೆ, ತೀರ್ಥಹಳ್ಳಿ, ಮಾಲೂರು, ಕಾರ್ಗಲ್ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಹರಿಹರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮಾಡಿ ಚಿನ್ನಾಭರಣಗಳನ್ನು ಕಳವು ಮಾಡಿದ ಆರೋಪಿ. ಈತನನ್ನು ಮಂಗಳೂರು ನಗರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.  ಈತನಿಂದ ಮನೆ ಕಳ್ಳತನ ಮಾಡಿ ಕಳವು ಮಾಡಿದ ಸುಮಾರು ರೂ 15 ಲಕ್ಷ ರೂ ಮೌಲ್ಯದ 270 ಗ್ರಾಂ ಚಿನ್ನಾಭರಣಗಳನ್ನು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಬೈಕ್  ಹಾಗೂ 2 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.



ಆರೋಪಿಯು ಮಂಗಳೂರು ನಗರ, ಉಡುಪಿ ಜಿಲ್ಲೆಯ ಮಣಿಪಾಲ ಮತ್ತು ಕಾರ್ಕಳ ಪೊಲೀಸ್ ಠಾಣೆಯ ಒಟ್ಟು 2 ಪ್ರಕರಣಗಳು, ಶಿವಮೊಗ್ಗ ಜಿಲ್ಲೆ ಆಗುಂಬೆ, ತೀರ್ಥಹಳ್ಳಿ, ಮಾಲೂರು, ಕಾರ್ಗಲ್ ಪೊಲೀಸ್ ಠಾಣೆಗೆ ಸಂಬಂಧಿಸಿದ ಒಟ್ಟು 8 ಪ್ರಕರಣಗಳು, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮತ್ತು ಹರಿಹರಪುರ ಪೊಲೀಸ್ ಠಾಣಾ ವ್ಯಾಪ್ತಿಯ 2 ಪ್ರಕರಣಗಳಲ್ಲಿ ಮನೆ ಕಳ್ಳತನ ಮಾಡಿದ್ದು ಮಂಗಳೂರಿನಲ್ಲಿ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಒಂದು ಮನೆ ಕಳ್ಳತನ ಮಾಡಿದ್ದು ಒಟ್ಟು 13 ಪ್ರಕರಣಗಳಲ್ಲಿ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಂಗಳೂರಿನಲ್ಲಿ ಮನೆ ಕಳ್ಳತನ ಮಾಡಲು ಬಂದ ಸಮಯದಲ್ಲಿ ಆರೋಪಿಯು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ ಸಮಯ ಆರೋಪಿಯು ಆತನ ಸಹಚರನಾದ ಹಾಸನ ಜಿಲ್ಲೆಯ ಅರಕೂಲಗೂಡಿನ ಪುನೀತ್ ಎಂಬಾತನೊಂದಿಗೆ ಸೇರಿಕೊಂಡು ಹಲವಾರು ಕಡೆ ಯಾರೂ ಇಲ್ಲದ ಮನೆಯ ಬೀಗ ಒಡೆದು ಚಿನ್ನಾಭರಣಗಳನ್ನು ಕಳವು ಮಾಡಿರುತ್ತಾನೆ ಎಂದು ತಿಳಿದುಬಂದಿದೆ. ಈತನು ಕಳವು ಮಾಡಿದ ಮನೆಯ ಕಳ್ಳತನ ಪ್ರಕರಣಗಳಲ್ಲಿ ಚಿನ್ನಾಭರಣಗಳನ್ನು ಅರೋಪಿಯಿಂದ ವಶಪಡಿಸಿಕೊಂಡಿದ್ದಾರೆ.

ಆರೋಪಿಯು 2005 ರಲ್ಲಿ  ಮೈಸೂರು ನಗರ ವಿಜಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಗಂಗಮ್ಮ ಎಂಬ ಮಹಿಳೆಯ ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿದ್ದು ಈತನು ಮೈಸೂರಿನ ಮಂಟೆಲಿಂಗಯ್ಯ ಮತ್ತು ಇತರ ಆರೋಪಿಗಳೊಂದಿಗೆ ಸೇರಿಕೊಂಡು ಗಂಗಮ್ಮನವರನ್ನು ಅಪಹರಿಸಿ ಕೊಲೆ ಮಾಡಿ ಮೃತದೇಹವನ್ನು ಕಬಿನಿ ನದಿಗೆ ಬಿಸಾಡಿದ್ದನು.  ಈ ಪ್ರಕರಣ ದಾಖಲಾದ ಸಮಯ ಆತನ ಹೆಸರು ರೌಡಿ ಸಿದ್ದ ಎಂಬುದಾಗಿ ಇದ್ದು, ಈತನು ಕೊಲೆ ಪ್ರಕರಣದಲ್ಲಿ ದಸ್ತಗಿರಿಯಾಗಿ ನ್ಯಾಯಾಂಗ ಬಂಧನದಲ್ಲಿದ್ದ ಸಮಯ 2006 ನೇ ಇಸವಿಯಲ್ಲಿ, ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಮಂಡ್ಯ ಜಿಲ್ಲೆಯ ಮದ್ದೂರು ಎಂಬಲ್ಲಿ ಪೊಲೀಸರ ಕಸ್ಟಡಿಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದನು.  ಈವರೆಗೆ ಪತ್ತೆಯಾಗದೇ ತಲೆಮರೆಸಿಕೊಂಡಿದ್ದನು. ಈತನ ವಿರುದ್ಧ ಎಲ್ ಪಿ ಸಿ ಬಂಧಮ ವಾರೆಂಟ್ ಇದೆ. ಕೊಲೆ ಪ್ರಕರಣದಲ್ಲಿ ಈತನೊಂದಿಗೆ ಇದ್ದ ಇತರ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗಿರುತ್ತದೆ.

ಆರೋಪಿಯು ಈ ಹಿಂದೆ ಉಡುಪಿ ಜಿಲ್ಲೆಯ ಕೋಟ ಠಾಣೆ ಮತ್ತು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮಾಡಿ ಪೊಲೀಸರಿಂದ ಬಂಧಿತನಾಗಿದ್ದು ಜಾಮೀನಿನಲ್ಲಿ ಬಿಡುಗಡೆ ಹೊಂದಿದ್ದನು.

ಆರೋಪಿಯ ವಿರುದ್ಧ ಮೈಸೂರು ನಗರದ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ನಜರ್ ಬಾದ್ ಮತ್ತು ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ವಾಹನ ಕಳವು ಪ್ರಕರಣ ಮತ್ತು ಮನೆ ಕಳ್ಳತನ, ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ, ಲಕ್ಷ್ಮೀ ಪುರಂ ಪೊಲೀಸ್‌ ಠಾಣೆಯಲ್ಲಿ ಕಳವು ಪ್ರಕರಣ, ವಿಜಯ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ಮತ್ತು ಕಳವು ಪ್ರಕರಣ ದಾಖಲಾಗಿದ್ದು ಈತನ ವಿರುದ್ಧ ಮೇಟಗಳ್ಳಿ ಪೊಲೀಸ್‌ ಠಾಣೆಯಲ್ಲಿ ರೌಡಿ ಶೀಟ್ ತೆರೆಯಲಾಗಿದೆ. ಈತನು ಪೊಲೀಸ್ ಕಸ್ಟಡಿಯಿಂದ ಪರಾರಿಯಾದ ಬಗ್ಗೆ ಮಂಡ್ಯ ಜಿಲ್ಲೆಯ ಮದ್ದೂರು ಪೊಲೀಸ್ ಠಾಣೆಯಲ್ಲಿ ಕಸ್ಟಡಿ ಎಸ್ಕೆಪ್ ಪ್ರಕರಣ ದಾಖಲಾಗಿದೆ.

ಈ  ಎಲ್ಲಾ ಪ್ರಕರಣಗಳಲ್ಲಿ ಆರೋಪಿ ತಲೆಮರೆಸಿಕೊಂಡಿದ್ದು ಈತನ ವಿರುದ್ಧ ತಲೆಮರೆಸಿಕೊಂಡಿರುವ ಆರೋಪಿ ಎಂದು ಒಟ್ಟು12 ಎಲ್,ಪಿ,ಸಿ ವಾರೆಂಟ್ ಇದೆ.  ಮಂಗಳೂರು ನಗರದಲ್ಲಿ ಕಳ್ಳತನಕ್ಕೆ ಸಂಬಂಧಿಸಿದ ಒಟ್ಟು 1 ಪ್ರಕರಣ ಹಾಗೂ ಮೈಸೂರು ಹಾಗೂ ಮಂಡ್ಯ ಜಿಲ್ಲೆಯ 10 ಠಾಣೆಗಳಲ್ಲಿ ಕೊಲೆ, ಅತ್ಯಾಚಾರ, ಕೊಲೆ ಯತ್ನ ಹಾಗೂ ಕಳ್ಳತನಕ್ಕೆ ಸಂಬಂಧಿಸಿದಂತೆ ಒಟ್ಟು14 ಪ್ರಕರಣಗಳು, ಉಡುಪಿ ಜಿಲ್ಲೆಯಲ್ಲಿ 3 ಪೊಲೀಸ್‌ ಠಾಣೆಗಳಲ್ಲಿ ಕಳ್ಳತನಕ್ಕೆ ಸಂಬಂಧಿಸಿದ ಒಟ್ಟು 3 ಪ್ರಕರಣಗಳು, ಶಿವಮೊಗ್ಗ ಜಿಲ್ಲೆಯಲ್ಲಿ 4 ಪೊಲೀಸ್ ಠಾಣೆಗಳಲ್ಲಿ ಕಳ್ಳತನಕ್ಕೆ ಸಂಬಂಧಿಸಿದ ಒಟ್ಟು 8 ಪ್ರಕರಣಗಳು, ಹಾಸನ ಜಿಲ್ಲೆಯಲ್ಲಿ 2 ಪೊಲೀಸ್ ಠಾಣೆಗಳಲ್ಲಿ ಕಳ್ಳತನಕ್ಕೆ ಸಂಬಂಧಿಸಿದ ಒಟ್ಟು 2 ಪ್ರಕರಣಗಳು ಸೇರಿ ಒಟ್ಟು 30 ಪ್ರಕರಣಗಳು ದಾಖಲಾಗಿರುತ್ತವೆ.


ಆರೋಪಿಗಳನ್ನು ಬಂಧಿಸಿದ ಮಂಗಳೂರು ಸಿಸಿಬಿ ಘಟಕದ ಸಹಾಯಕ ಪೊಲೀಸ್‌ ಆಯುಕ್ತರಾದ ಪಿ ಎ ಹೆಗಡೆ ರವರ ನಿರ್ದೇಶನದ ಸಿಸಿಬಿ ಘಟಕದ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್ ಎಂ ಹಾಗೂ ಪಿಎಸ್‌ಐಯವರಾದ ಸುದೀಪ್ ಎಂ ವಿ ಮತ್ತು ಎ.ಎಸ್.ಐ ಶಶಿಧರ ಶೆಟ್ಟಿ ಹಾಗೂ ಸಿಬ್ಬಂದಿಗಳಿಗೆ ಹತ್ತು ಸಾವಿರ ರೂ ನಗದು ಬಹುಮಾನವನ್ನು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಘೋಷಿಸಿದ್ದಾರೆ.

Ads on article

Advertise in articles 1

advertising articles 2

Advertise under the article