ಜಿಪಂ ಮುಂದೆ 2ಲಕ್ಷ ರೂ. ನೋಟುಗಳನ್ನು ಗಾಳಿಗೆಸೆದು ಲಂಚಾವತಾರಕ್ಕೆ ಬಿಸಿ ಮುಟ್ಟಿಸಿದ ಗ್ರಾಪಂ ಸದಸ್ಯ
Sunday, April 2, 2023
ಹೈದರಾಬಾದ್: ಇಂದು ಯಾವ ಸರ್ಕಾರಿ ಕೆಲಸವಾಗಬೇಕೆಂದರೂ ಲಂಚ ಕೊಡಲೇಬೇಕು. ಲಂಚವಿಲ್ಲದಿದ್ದರೆ ಯಾವುದೇ ಕೆಲಸ ಆಗುವುದಿಲ್ಲ. ಕೆಲವು ಸರ್ಕಾರಿ ನೌಕರರು ಹೈಟೆಕ್ ಭಿಕ್ಷುಕರಂತೆ ವರ್ತಿಸುತ್ತಿದ್ದಾರೆ. ಲಂಚಕ್ಕೆ ಕಡಿವಾಣ ಹಾಕಲು ಎಂತಹ ಕಾನೂನನ್ನು ಜಾರಿಗೊಳಿಸಿದರೂ ಅದು ಪರಿಣಾಮಕಾರಿಯಾಗುತ್ತಿಲ್ಲ. ಆದರೆ, ಲಂಚ ಕೇಳವವರನ್ನು ಪ್ರಶ್ನಿಸಿದಲ್ಲಿ ಮಾತ್ರ ಅವರ ಎದೆಯಲ್ಲಿ ನಡುಕ ಹುಟ್ಟುವುದಂತೂ ಗ್ಯಾರಂಟಿ. ಇದೇ ರೀತಿ ಮಹಾರಾಷ್ಟ್ರದಲ್ಲಿ ಗ್ರಾಪಂ ಸದಸ್ಯನೊಬ್ಬ ಲಂಚ ಕೇಳಿದ ಬ್ಲಾಕ್ ಪಂಚಾಯತ್ ಅಧಿಕಾರಿಗೆ ಬಿಸಿ ಮುಟ್ಟಿಸಿದ ಕಾರ್ಯವೊಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಗ್ರಾಪಂ ಸದಸ್ಯ ಮಂಗೇಶ್ ಸಾಬಲೆ ಮಹಾರಾಷ್ಟ್ರದ ಸಂಭಾಜಿ ಜಿಲ್ಲೆಯ ಗತೈ ಪೈಗಾ ಗ್ರಾಮದಲ್ಲಿ ಬಾವಿಯೊಂದನ್ನು ಕೊರೆಸಬೇಕೆಂಬ ಬಯಸಿದ್ದರು. ಇದಕ್ಕೆ ಅನುಮತಿ ಕೋರಿ ಪಂಚಾಯತ್ ಗೆ ಬೇಡಿಕೆಯನ್ನೂ ಇಟ್ಟಿದ್ದರು. ಆದರೆ, ಅಧಿಕಾರಿಗಳು ಈ ಪ್ರಸ್ತಾವನೆಯ ಅನುಮೋದನೆಗೆ 12 ಪರ್ಸೆಂಟ್ ಲಂಚ ಕೇಳಿದ್ದಾರೆ. ಗ್ರಾಮದ ಅಭಿವೃದ್ಧಿ ಕಾರ್ಯಕ್ಕೆಂದು ಲಂಚ ಕೇಳಿದ್ದಕ್ಕೆ ಅಧಿಕಾರಿಗಳ ವಿರುದ್ಧ ಸಾಬಲೆಯವರಿಗೆ ಎಲ್ಲಿಲ್ಲದ ಆಕ್ರೋಶ ಬಂದಿದೆ.
ಆದರೆ ಗ್ರಾಮದ ಕೆಲಸಕ್ಕೆಂದು ಸುಮ್ಮನಿದ್ದ ಸಾಬಲೆ, ತುರ್ತಾಗಿ ಬಾವಿ ತೋಡಬೇಕೆಂದು ಒಂದು ಲಕ್ಷ ರೂ. ಹಣದೊಂದಿಗೆ ಪಂಚಾಯತ್ ಬ್ಲಾಕ್ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಆದರೆ, ಅಧಿಕಾರಿಗಳು ತಮಗೆ 12ರಷ್ಟು ಹಣ ಬೇಕೇ ಬೇಕೆಂದು ಪಟ್ಟು ಹಿಡಿದಿದ್ದಾರೆ. ಪರಿಣಾಮ ಇನ್ನಷ್ಟು ಆಕ್ರೋಶಗೊಂಡ ಗ್ರಾಪಂ ಸದಸ್ಯ ಮಂಗೇಶ್ ಸಾಬಲೆ ನಿರಾಸೆಯಿಂದ ಅಲ್ಲಿಂದ ಹಿಂತಿರುಗಿದ್ದಾರೆ. ಆದರೆ
ಅದರ ಮರು ದಿನವೇ ಅಂದರೆ ಮಾರ್ಚ್ 31ರಂದು ಬೆಳಗ್ಗೆ ಜಿಪಂ ವಲಯ ಕಚೇರಿ ಮುಂದೆ 2 ಲಕ್ಷ ರೂ. ನೋಟುಗಳ ಸರಮಾಲೆಯೊಂದಿಗೆ ಆಗಮಿಸಿದ ಸಾಬಲೆ, ಪಂಚಾಯತ್ ಅಧಿಕಾರಿಗಳು ಗ್ರಾಮದ ಜನತೆಗಾಗಿ ಮಾಡಿರುವ ಕೆಲಸಕ್ಕೆ ಲಂಚದ ಬೇಡಿಕೆ ಇಟ್ಟಿದ್ದರೆಂದು ಆಕ್ರೋಶ ವ್ಯಕ್ತಪಡಿಸುತ್ತಾ ಮಾಲೆಯಲ್ಲಿದ್ದ ಒಂದೊಂದೇ ನೋಟಗಳನ್ನು ಕಿತ್ತು ಗಾಳಿಯಲ್ಲಿ ಎಸೆದಾಡಿದ್ದಾರೆ. ಈ ದೃಶ್ಯವನ್ನು ಅಲ್ಲಿದ್ದ ಕೆಲವರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಆ ವಿಡಿಯೋ ವೈರಲ್ ಆಗಿದೆ.
ಗರೈ ಪೈಗಾ ಗ್ರಾಮದ 20 ಮಂದಿ ರೈತರೂ ಆಕ್ರೋಶ ವ್ಯಕ್ತಪಡಿಸಿ 'ತಮ್ಮ ಹೊಲಗಳಲ್ಲಿ ಕೊಳವೆಬಾವಿ ಕೊರೆಸಲು ಸಲ್ಲಿಸಿರುವ ಅರ್ಜಿಗಳು ಆ ಪಂಚಾಯತ್ ಬ್ಲಾಕ್‌ನಲ್ಲಿ ಬಾಕಿ ಉಳಿದಿವೆ. ಲಂಚ ನೀಡದ ಕಾರಣ ಅನುಮತಿ ನೀಡದೆ ಬಾಕಿ ಇರಿಸಲಾಗಿದೆ' ಎಂದು ಆರೋಪಿಸಿದ್ದಾರೆ. ಅಲ್ಲದೆ ಕುರಿಗಳ ಶೆಡ್, ಕಾಲುವೆಗಳ ನಿರ್ಮಾಣದಂತಹ ಯಾವುದೇ ಕಾಮಗಾರಿಗಳನ್ನು ಮಾಡಬೇಕಾದರೂ ಪಂಚಾಯತ್ ಸಮಿತಿ ಅಧಿಕಾರಿಗಳು ಕೇಳಿದ ಮೊತ್ತವನ್ನು ಲಂಚವಾಗಿ ನೀಡಬೇಕಾಗಿದೆ ಎಂದು ರೈತರು ದೂರುತ್ತಾರೆ.
ಮಂಗೇಶ್ ಸಾಬಲೆಯವರ ವಿನೂತನ ಪ್ರತಿಭಟನೆಯ ಪರಿಣಾಮ ಅಧಿಕಾರಿಗಳೇ ಕಿತ್ತಾಡಿಕೊಂಡಿದ್ದಾರೆ. ಲಂಚ ಪಡೆದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮೇಲಿನ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಈ ವಿಡಿಯೋ ವೈರಲ್ ಆದ ನಂತರ ನೆಟ್ಟಿಗರು ಅಧಿಕಾರಿಯ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಮತ್ತು ಸಾಬಲೆ ಅವರನ್ನು ಪ್ರಶಂಸಿಸಿದ್ದಾರೆ. ಸಾಬಲೆ ಅವರು ಎಸೆದ ಕೆಲವು ನೋಟುಗಳನ್ನು ಹತ್ತಿರದ ಮಕ್ಕಳು ಎತ್ತಿಕೊಂಡರು ಮತ್ತು ಕೆಲವನ್ನು ಅಲ್ಲಿದ್ದ ಕೆಲವರು ತೆಗೆದುಕೊಂಡು ಹೋಗಿದ್ದಾರೆ.