30 ಕೋಟಿ ಆಸ್ತಿಯಿದ್ದರೂ ಎರಡು ಹೊತ್ತು ಊಟ ಹಾಕದ ಪುತ್ರ: ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ವೃದ್ಧ ದಂಪತಿ
Saturday, April 1, 2023
ನವದೆಹಲಿ : 30 ಕೋಟಿ ಆಸ್ತಿ ನೀಡಿದ್ದರೂ ತಮ್ಮ ಪುತ್ರ ಎರಡು ಹೊತ್ತಿನ ಅನ್ನವನ್ನೂ ನೀಡಲು ನಿರಾಕರಿಸಿದ್ದಾನೆ ಎಂದು ಮನನೊಂದು ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.
ವೃದ್ಧ ದಂಪತಿ ಮಾರ್ಚ್ 29ರ ರಾತ್ರಿ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಾರ್ಖಿ ದಾದ್ರಿಯ ಬದ್ರಾದ ಶಿವ ಕಾಲೋನಿಯಲ್ಲಿರುವ ಜಗದೀಶ್ ಚಂದ್ರ ಆರ್ಯ (78) ಮತ್ತು ಭಗ್ಲಿ ದೇವಿ (77) ತಮ್ಮ ಮನೆಯಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದಾರೆ.
ವಿಷ ಸೇವನೆಗೆ ಮುನ್ನ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಈ ವೃದ್ಧ ದಂಪತಿಯೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಇಬ್ಬರೂ ಮೃತಪಟ್ಟಿದ್ದರು. 30 ಕೋಟಿ ಆಸ್ತಿ ಹೊಂದಿರುವ ತಮ್ಮ ಪುತ್ರ ಎರಡು ಹೊತ್ತಿನ ಊಟವನ್ನೂ ನೀಡಲು ನಿರಾಕರಿಸಿದ್ದಾನೆ ಎಂದು ಜಗದೀಶ್ ಚಂದ್ರ ಆರ್ಯ ಆತ್ಮಹತ್ಯೆ ಪತ್ರದಲ್ಲಿ ಬರೆದಿದ್ದಾರೆ. ಊಟ ಕೊಟ್ಟರೂ ಹಳಸಿದ ಆಹಾರವನ್ನು ಕೊಡುತ್ತಿದ್ದರು. 30 ಕೋಟಿ ಆಸ್ತಿ ಇದ್ದರೂ ಎರಡು ಹೊತ್ತು ಊಟ ಹಾಕಲು ಅವನಿಗೂ ಇಷ್ಟವಿರಲಿಲ್ಲ ಎಂದು ಜಗದೀಶ್ ಆರ್ಯಾ ಡೆತ್ ನೋಟ್ ನಲ್ಲಿ ವಿವರಿಸಿದ್ದಾರೆ.
30 ಕೋಟಿ ರೂ. ಆಸ್ತಿ ನಮ್ಮದಾಗಿದ್ದು, ಅದನ್ನು ಪುತ್ರನಿಗೆ ಕೊಟ್ಟಿದ್ದೆವು. ಆದರೆ ಆತ ನಮ್ಮನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ. ಆದ್ದರಿಂದ ಈ ಆಸ್ತಿಯನ್ನು ಬಾಂದ್ರಾದಲ್ಲಿರುವ ಆರ್ಯ ಸಮಾಜಕ್ಕೆ ದಾನ ಮಾಡುವಂತೆ ವೃದ್ಧ ದಂಪತಿ ಮನವಿ ಮಾಡಿದ್ದಾರೆ. ದಂಪತಿಯು ತಮ್ಮ ಸಾವಿಗೆ ತನ್ನ ಮಗ ವೀರೇಂದ್ರ ಮತ್ತು ಇಬ್ಬರು ಸೊಸೆಯರನ್ನು ಕಾರಣ ಎಂದು ಹೆಸರಿಸಿದ್ದಾರೆ. ಅಲ್ಲದೇ ನಮ್ಮ ಈ ಸ್ಥಿತಿಗೆ ಕಾರಣವಾದವರನ್ನು ಶಿಕ್ಷಿಸಬೇಕು ಎಂದು ಅವರು ಅತ್ಮಹತ್ಯೆ ಪತ್ರದಲ್ಲಿ ಮನವಿ ಮಾಡಿದ್ದಾರೆ.