ಪ್ರೇಯಸಿ ಬರ್ತ್ ಡೇ ಆಚರಿಸಿ ಕುತ್ತಿಗೆ ಕೊಯ್ದು ಹತ್ಯೆ : ಮೃತದೇಹದೊಂದಿಗೆ 5ಗಂಟೆ ಕಾಲ ಕಳೆದ ಪ್ರಿಯಕರ
Saturday, April 15, 2023
ಬೆಂಗಳೂರು: ಅವರಿಬ್ಬರೂ ಪ್ರೇಮಿಗಳು. ಕಳೆದ ಆರು ವರ್ಷಗಳಿಂದ ಇಬ್ಬರೂ ಪ್ರೀತಿಯ ಬಲೆಗೆ ಬಿದ್ದಿದ್ದರು. ಶುಕ್ರವಾರ ಆಕೆಯ ಬರ್ತ್ ಡೇ. ಆತ ತನ್ನ ಪ್ರೇಯಸಿಯ ಬರ್ತ್ ಡೇಯನ್ನು ಅದ್ದೂರಿಯಾಗಿಯೇ ಆಚರಿಸಿದ್ದಾನೆ. ಆ ಬಳಿಕ ನಡೆದದ್ದೇ ದುರಂತ. ಆಗಷ್ಟೇ ಕೇಕ್ ಕಟ್ ಮಾಡಿದ್ದ ಪ್ರೇಯಸಿಯ ಕುತ್ತಿಗೆಯನ್ನೇ ಕೊಯ್ದು ಪ್ರಿಯಕರನೇ ಹತ್ಯೆ ಮಾಡಿದ್ದಾನೆ. ಈ ಮೂಲಕ ಆ ನತದೃಷ್ಟೆ ತನ್ನ ಹುಟ್ಟುಹಬ್ಬದಂದೇ ಪ್ರಿಯಕರನಿಂದಲೇ ಹತ್ಯೆಯಾಗಿದ್ದಾಳೆ.
ಹೌದು ಇಂತಹ ಅಮಾನುಷ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನ ಲಗ್ಗೆರೆಯಲ್ಲಿ ನಡೆದಿದೆ. ನವ್ಯಾ ಎಂದು ಕೊಲೆಯಾದ ದುರ್ದೈವಿ. ಪ್ರಶಾಂತ್ ಹತ್ಯೆಗೈದ ಆರೋಪಿ.
ಈ ಕಿರಾತಕ ತನ್ನ ಪ್ರೇಯಸಿಯ ಹುಟ್ಟುಹಬ್ಬವನ್ನು ಗಡದ್ದಾಗಿ ಆಚರಿಸಿದ್ದಾನೆ. ಬಳಿಕ ಅದೇನಾಯ್ತ ಗೊತ್ತಿಲ್ಲ ಚಾಕು ತೆಗೆದು ಪ್ರೇಯಸಿಯ ಕುತ್ತಿಗೆ ಕೊಯ್ದು ಹತ್ಯೆ ಮಾಡಿದ್ದಾನೆ. ನವ್ಯಾ, ಪೊಲೀಸ್ ಇಲಾಖೆಯ ಆಂತರಿಕ ಭದ್ರತಾ ವಿಭಾಗದಲ್ಲಿ ಕ್ಲರ್ಕ್ ಆಗಿ ಕರ್ತವ್ಯನಿರ್ವಹಿಸುತ್ತಿದ್ದಳು. ಪ್ರಶಾಂತ್ ಹಾಗೂ ನವ್ಯಾ ಇಬ್ಬರೂ ಕನಕಪುರ ಮೂಲದವರಾಗಿದ್ದು, ದೂರ ಸಂಬಂಧಿಕರೂ ಆಗಿದ್ದಾರೆ. ಕಳೆದ ಆರು ವರ್ಷಗಳಿಂದ ಇಬ್ಬರು ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ಕಳೆದ ಮಂಗಳವಾರ ನವ್ಯಾ ಹುಟ್ಟುಹಬ್ಬವಿತ್ತು. ಆದರೆ ಅಂದು ಬ್ಯುಸಿ ಇದ್ದೇನೆಂದು ಹೇಳಿದ್ದ ಪ್ರಶಾಂತ್ ನಿನ್ನೆ ಬರ್ತಡೇ ಸೆಲೆಬ್ರೇಷನ್ ಪ್ಲಾನ್ ಮಾಡಿಕೊಂಡಿದ್ದಾನೆ. ಅದರಂತೆ ನಿನ್ನೆ ರಾತ್ರಿ ಬರ್ತಡೇ ಸೆಲೆಬ್ರೇಷನ್ ಮಾಡುವುದಕ್ಕೆ ಪ್ರಶಾಂತ್ ಸಿದ್ಧತೆ ಮಾಡಿಕೊಂಡಿದ್ದಾನೆ. ರಾತ್ರಿ ಕೇಕ್ ಕಟ್ ಮಾಡಿ ಕೇಕ್ ತಿನ್ನಿಸಿದ್ದಾನೆ. ಆ ಬಳಿಕ ಹರಿತವಾದ ಚಾಕುವಿನಿಂದ ಕುತ್ತಿಗೆ ಕೊಯ್ದು ನವ್ಯಾಳನ್ನು ಕೊಲೆ ಮಾಡಿದ್ದಾನೆ.
ಇದೀಗ ಮೃತ ಯುವತಿಯ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ. ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ನವ್ಯಾ ಇತ್ತೀಚೆಗೆ ಬೇರೆಯವರೊಂದಿಗೆ ಚಾಟಿಂಗ್ ಮಾಡುತ್ತಿದ್ದಾಳೆಂದು ಪ್ರಶಾಂತ್‌ಗೆ ಅನುಮಾನ ಹುಟ್ಟಿದೆ. ಇದೇ ಕಾರಣಕ್ಕೆ ಇವರಿಬ್ಬರ ಮಧ್ಯೆ ಜಗಳ ಆಗುತ್ತಿತ್ತು ಎನ್ನಲಾಗಿದೆ. ಇದೇ ಅನುಮಾನದಿಂದ ಬರ್ತಡೇ ಆಚರಿಸಿ ಬಳಿಕ ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ. ನಿನ್ನೆ ಸಂಜೆ ನಾಲ್ಕು ಗಂಟೆಗೆ ಆರೋಪಿ ಕೊಲೆಮಾಡಿದ್ದು, ರಾತ್ರಿ ಒಂಭತ್ತು ಗಂಟೆಗೆ ಪ್ರಕರಣ ಬೆಳಕಿಗೆ ಬಂದಿದೆ. ಕೊಲೆ ಮಾಡಿದ ಬಳಿಕ ಪ್ರಶಾಂತ್ ಐದು ಗಂಟೆಗಳ ಕಾಲ ನವ್ಯಾ ಮೃತದೇಹದೊಂದಿಗೇ ಇದ್ದ ಎಂದು ತಿಳಿದು ಬಂದಿದೆ.