ರೈಲಿಗೆ ನುಗ್ಗಿ ಬೆಂಕಿ ಹಚ್ಚಿದ ದುಷ್ಕರ್ಮಿ: ಮಹಿಳೆ ಮಗು ಸೇರಿ ಮೂವರು ಮೃತ್ಯು, 9ಮಂದಿಗೆ ಗಾಯ
Monday, April 3, 2023
ಕೋಝಿಕ್ಕೋಡ್: ಕೇರಳದ ಕೋಝಿಕ್ಕೋಡ್‌ನಲ್ಲಿ ರವಿವಾರ ತಡರಾತ್ರಿ ಚಲಿಸುತ್ತಿದ್ದ ರೈಲಿನ ಬೋಗಿಗೆ ನುಗ್ಗಿದ ದುಷ್ಕರ್ಮಿಯೋರ್ವನು ಬೋಗಿಗೆ ಪ್ರಯಾಣಿಕರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಈ ದುರ್ಘಟನೆಯಲ್ಲಿ ಮೂವರು ಸಜೀವ ದಹನಗೊಂಡಿದ್ದು, ಒಂಬತ್ತು ಮಂದಿಗೆ ಸುಟ್ಟ ಗಾಯಗಳಾಗಿವೆ.
ಈ ಘಟನೆ ರವಿವಾರ ರಾತ್ರಿ ಸುಮಾರು 10 ಗಂಟೆ ವೇಳೆಗೆ ಅಲಪ್ಪುಝ- ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದಿದೆ. ಮೃತರನ್ನು ಕಣ್ಣೂರಿನ ಮಟ್ಟನ್ನೂ ನಿಎವಾಸಿ ರಹಮತ್ ಮತ್ತು ಅವರ ಸಹೋದರಿಯ ಪುತ್ರಿ ಜಾಹ್ರಾ ಬತುಲ್ ಹಾಗೂ ಕಣ್ಣೂರಿನ ಕೊಡೋಲಿಪ್ರಮ್ ಮೂಲದ ಮೃತ ನೌಫಿಕ್ ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ 9 ಮಂದಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಅವರಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿವೆ.
ಅಪರಿಚಿತ ದುಷ್ಕರ್ಮಿ ಪೆಟ್ರೋಲ್ ಮಾದರಿಯ ದ್ರವ ತುಂಬಿದ್ದ ಎರಡು ಬಾಟಲಿಗಳೊಂದಿಗೆ 'D1' ಕೋಚ್‌ಗೆ ನುಗ್ಗಿದ್ದಾನೆ. ಈತ ಪ್ರಯಾಣಿಕರು ಮತ್ತು ರೈಲಿನ ಬೋಗಿಗೆ ಅದನ್ನು ಚೆಲ್ಲಿ ಬೆಂಕಿ ಹಚ್ಚಿದ್ದಾನೆ. ಬೆಂಕಿ ವ್ಯಾಪಿಸುತ್ತಿದ್ದಂತೆ ಕೆಲ ಪ್ರಯಾಣಿಕರು ರೈಲಿನ ಚೈನ್ ಎಳೆದಿದ್ದಾರೆ. ರೈಲು ನಿಲ್ಲುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದಾನೆ. ಆತನಿಗೂ ಸುಟ್ಟ ಗಾಯಗಳಾಗಿರುವ ಶಂಕೆ ವ್ಯಕ್ತವಾಗಿದೆ. ಸೋಮವಾರ ಮುಂಜಾನೆ ಹಳಿಗಳ ಮೇಲೆ ಹುಡುಕಾಟ ನಡೆಸಿದಾಗ ಎಳತ್ತೂರು ರೈಲು ನಿಲ್ದಾಣದ ಬಳಿ ಈ ಮೂವರ ಮೃತದೇಹಗಳು ಪತ್ತೆಯಾಗಿವೆ.
ರಹ್ಮತ್ ಚಾಲಿಯಂನಲ್ಲಿರುವ ತಮ್ಮ ಸಹೋದರಿಯ ಮನೆಯಲ್ಲಿ ಉಪವಾಸ ಮುರಿಯಲು ಹೋಗಿದ್ದರು. ಹಿಂದಿರುಗುವಾಗ ತನ್ನ ಸಹೋದರಿ ಜಸೀಲಾ ಪುತ್ರಿ ಜಹ್ರಾಳನ್ನು ತನ್ನೊಂದಿಗೆ ಕರೆದೊಯ್ಯುತ್ತಿದ್ದರು. ದಾಳಿ ನಡೆದಾಗ ಮೂವರು ಕಣ್ಣೂರಿನ ಮನೆಗೆ ತೆರಳುತ್ತಿದ್ದರು. ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಬಳಿಕ ಅವರು ಭಯಭೀತರಾಗಿ ಹೊರಗೆ ಹಾರಿದ್ದಾರೆ ಎನ್ನಲಾಗಿದೆ.
ಆರೋಪಿಯ ಸಿ.ಸಿ. ಫೂಟೇಜ್ ಲಭಿಸಿದ್ದು, ಕೋಝಿಕ್ಕೋಡ್ ನಗರ ಪೊಲೀಸ್ ಕಮಿಷನರ್ ರಾಜ್‌ಪಾಲ್ ಮೀನಾ ಅವರು ಆರೋಪಿಯ ಶಂಕಿತ ಚಿತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಘಟನೆಯ ಬಗ್ಗೆ ಭಯೋತ್ಪಾದನೆಯ ಶಂಕೆ ವ್ಯಕ್ತವಾಗಿದೆ. ಈ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.