ಕೊನೆಗೂ ಪೊಲೀಸ್ ಕೈಗೆ ಸಿಕ್ಕಿಬಿದ್ದ ಖಲಿಸ್ಥಾನಿ ಬೆಂಬಲಿಗ ಅಮೃತ್ ಪಾಲ್ ಸಿಂಗ್
ಚಂಡೀಗಢ: ಪೊಲೀಸರಿಗೇ ಚಳ್ಳೇಹಣ್ಣು ತಿನ್ನಿಸಿ ಎಸ್ಕೇಪ್ ಆಗಿದ್ದ ಖಲಿಸ್ಥಾನಿ ನಾಯಕ ಅಮೃತ್ ಪಾಲ್ ಸಿಂಗ್ ಒಂದು ತಿಂಗಳ ಹುಡುಕಾಟದ ಬಳಿಕ ಕೊನೆಗೂ ಪಂಜಾಬ್ ಪೊಲೀಸರು ಕೈಗೆ ಸಿಕ್ಕಿಬಿದ್ದಿದ್ದಾನೆ. ಪಂಜಾಬ್ ನ ಮೋಗಾದಲ್ಲಿ ಅಮೃತ್ ಪಾಲ್ ಸಿಂಗ್ ನನ್ನು ವಶಕ್ಕೆ ಪಡೆಯಲಾಗಿದೆ.
'ವಾರಿಸ್ ಪಂಜಾಬ್ ದೆ' ಸಂಘಟನೆಯ ಮುಖ್ಯಸ್ಥ ಅಮೃತ್ ಪಾಲ್ ಸಿಂಗ್ ಕಳೆದೊಂದು ತಿಂಗಳಿನಿಂದ ಪೊಲೀಸ್ ಕಣ್ಣು ತಪ್ಪಿಸಿ ಓಡಾಡಿಕೊಂಡಿದ್ದ. ಮಾರ್ಚ್ 18ರಂದು ಪೊಲೀಸರು ಅಮೃತ್ ಪಾಲ್ ಸಿಂಗ್ ನನ್ನು ಬಂಧಿಸಲು ತೆರಳಿದ್ದರು. ಈ ವೇಳೆ ಈತ ಜಲಂಧರ್ ಜಿಲ್ಲೆಯಲ್ಲಿ ಪೊಲೀಸರ ಬಲೆಯಿಂದ ತಪ್ಪಿಸಿಕೊಂಡು, ವಾಹನಗಳನ್ನು ಬದಲಿಸಿ ಸಿನಿಮೀಯ ರೂಪದಲ್ಲಿ ಅಮೃತ್ ಪಾಲ್ ಎಸ್ಕೇಪ್ ಆಗಿದ್ದ.
ಎಪ್ರಿಲ್ 20ರಂದು ಅಮೃತ್ ಪಾಲ್ ಸಿಂಗ್ ಪತ್ನಿ ಕಿರಣ್ ದೀಪ್ ಕೌರ್ ರೊಂದಿಗೆ ಲಂಡನ್ ಪರಾರಿಯಾಗಲು ವಿಮಾನ ಹತ್ತಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಅಮೃತಸರದ ಶ್ರೀ ಗುರು ರಾಮ್ ದಾಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ತಡೆದು ಪ್ರಶ್ನೆ ಮಾಡಿದ್ದರು. ಬಳಿಕ ಆತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಅಮೃತ್ ಪಾಲ್ ಸಿಂಗ್ ಖಲಿಸ್ತಾನಿ - ಪಾಕಿಸ್ತಾನಿ ಏಜೆಂಟ್ ಎಂಬುದು ಸರಕಾರದ ಗುಮಾನಿ. ಕೆಲ ವರ್ಷಗಳಿಂದ ಪಂಜಾಬ್ ನಲ್ಲಿ ನೆಲೆಸಿದ್ದ ಈತ ಸಶಸ್ತ್ರ ಬೆಂಬಲಿಗರ ಬೆಂಗಾವಲು ಹೊಂದಿದ್ದ. ಈತ ಖಲಿಸ್ತಾನಿ ಹೋರಾಟಗಾರ ಜರ್ನೈಲ್ ಸಿಂಗ್ ಬಿಂದ್ರಾವಾಲೆಯ ಬೆಂಬಲಿಗನಾಗಿದ್ದ ಎನ್ನಲಾಗಿದೆ. ಈತ 'ಬಿಂದ್ರಾವಾಲೆ 2.0' ಎಂದೇ ಜನಪ್ರಿಯನಾಗಿದ್ದ.