ಸುಳ್ಯ: ಟಿಕೆಟ್ ನಿರಾಕರಣೆ - ರಾಜಕೀಯಕ್ಕೆ ಗುಡ್ ಬೈ ಹೇಳಿದ ಎಸ್. ಅಂಗಾರ
Wednesday, April 12, 2023
ಸುಳ್ಯ: ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನಿರಾಕರಣೆ ಹಿನ್ನೆಲೆಯಲ್ಲಿ ಸುಳ್ಯ ಕ್ಷೇತ್ರದ ಶಾಸಕ, ಸಚಿವ ಎಸ್.ಅಂಗಾರ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ಮಂಗಳವಾರ ರಾತ್ರಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬೆನ್ನಲ್ಲೇ ಬಂಡಾಯ ಜೋರಾಗಿದೆ. ಇದೀಗ ಹಿರಿಯ ನಾಯಕ ಎಸ್.ಅಂಗಾರ ಅವರು ಟಿಕೆಟ್ ಕೈ ತಪ್ಪಿದ ಹಿನ್ನಲೆಯಲ್ಲಿ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್.ಅಂಗಾರ, ನನ್ನ ಪ್ರಾಮಾಣಿಕ ರಾಜಕೀಯಕ್ಕೆ ಈಗ ಬೆಲೆಯಿಲ್ಲದಂತಾಗಿದೆ. ಪ್ರಾಮಾಣಿಕತೆಯೇ ನನಗೆ ಮುಳುವಾಗಿದೆ. ಲಾಬಿ ಮಾಡುವುದು ನನ್ನ ಗುಣವಲ್ಲ. ಅದೇ ನನಗೆ ಹಿನ್ನಡೆಯಾಗಿದೆ. ನಾನು ಇನ್ನು ಮುಂದೆ ರಾಜಕಾರಣದಲ್ಲಿ ಇರೋದಿಲ್ಲ. ಚುನಾವಣಾ ಪ್ರಚಾರವನ್ನೂ ಮಾಡುವುದಿಲ್ಲ. ಹೊಸ ಅಭ್ಯರ್ಥಿ ಮತ್ತು ಅವರ ಗೆಲುವನ್ನು ಪಕ್ಷ ನೋಡಿಕೊಳ್ಳಬಹುದು ಹೇಳಿದ್ದಾರೆ.
ಸುಳ್ಯ ಕ್ಷೇತ್ರದಲ್ಲಿ ಆರು ಬಾರಿ ಶಾಸಕರಾಗಿ, ಸೋಲಿಲ್ಲದ ಸರದಾರನೆಂದು ಕರೆಸಿಕೊಳ್ಳುತ್ತಿರುವ ಎಸ್.ಅಂಗಾರ ಅವರಿಗೆ ಕ್ಷೇತ್ರದಲ್ಲಿ ಅಭಿವೃದ್ಧಿ ಶೂನ್ಯವೆಂಬ ಕಾರಣಕ್ಕೆ ಜನರಿಂದ ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಹೈಕಮಾಂಡ್ ಚುನಾವಣಾ ಟಿಕೆಟ್ ನೀಡಿರಲಿಲ್ಲ. ಈ ಬಾರಿ ಅಂಗಾರ ಬದಲು ಆದಿ ದ್ರಾವಿಡ ಸಮಾಜದ ಭಾಗೀರಥಿ ಮುರುಳ್ಯರವರಿಗೆ ಬಿಜೆಪಿ ಟಿಕೆಟ್ ನೀಡಿದೆ.