ಹೋಮ್ ಥಿಯೇಟರ್ ಸ್ಪೋಟಗೊಂಡು ನವವಿವಾಹಿತ ಮೃತ್ಯು ಪ್ರಕರಣಕ್ಕೆ ರೋಚಕ ತಿರುವು: ಬಾಂಬ್ ಗಿಫ್ಟ್ ನೀಡಿದ್ದ ವಧುವಿನ ಮಾಜಿ ಪ್ರಿಯಕರ
Wednesday, April 5, 2023
ಹೊಸದಿಲ್ಲಿ: ವಿವಾಹಕ್ಕೆ ಉಡುಗೊರೆಯಾಗಿ ಬಂದಿದ್ದ ಹೋಮ್ ಥಿಯೇಟರ್ ಸ್ಫೋಟಗೊಂಡು ನವವಿವಾಹಿತ ಹಾಗೂ ಆತನ ಸಹೋದರ ಸೋಮವಾರ ಸಾವನ್ನಪ್ಪಿರುವ ಹಾಗೂ ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆಗೆ ರೋಚಕ ತಿರುವು ದೊರಕಿದೆ. ವಧುವಿನ ಮಾಜಿ ಪ್ರಿಯಕರ ಪ್ರೇಯಸಿ ತನಗೆ ಸಿಕ್ಕಿಲ್ಲವೆಂದು ಎಸಗಿರುವ ಕೃತ್ಯವೇನೆಂದು ಗೊತ್ತಾದರೆ ಎಲ್ಲರೂ ದಂಗಾಗುತ್ತಾರೆ.
ಛತ್ತೀಸ್‌ಗಢ ರಾಜ್ಯದ ಕಬೀರ್ಧಾಮ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಹೇಮೇಂದ್ರ ಮೆರಾವಿಗೆ ಎಪ್ರಿಲ್ 1 ರಂದು ವಿವಾಹವಾಗಿದೆ. ಮದುವೆಯ ವೇಳೆ ಉಡುಗೊರೆಗಳು ದೊರಕಿತ್ತು. ಸೋಮವಾರ ಹೇಮೇಂದ್ರ ಹಾಗೂ ಮನೆಮಂದಿ ಸೇರಿಕೊಂಡು ಉಡುಗೊರೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹೇಮೇಂದ್ರ ತನಗೆ ಗಿಫ್ಟ್ ಬಂದಿದ್ದ ಹೋಮ್ ಥಿಯೇಟರ್ ಸಿಸ್ಟಮ್ ವಯರ್ ಸೆಟ್ ಮಾಡಿ ಫ್ಲಗ್ ಸ್ವಿಚ್ ಹಾಕಿದ ತಕ್ಷಣ ಸ್ಪೋಟಗೊಂಡಿದೆ. ಈ ವೇಳೆ ಹೇಮೇಂದ್ರ ಮೆರಾವಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಆತನ ಸಹೋದರ ಸೇರಿ ಐವರು ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಸಹೋದರ ರಾಜ್ ಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಉಳಿದ ನಾಲ್ವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಹೋಮ್ ಥಿಯೇಟರ್ ಸಿಡಿದ ತೀವ್ರತೆಗೆ ಮನೆಯ ಗೋಡೆ ಕುಸಿದು ಬಿದ್ದಿದ್ದು ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಾಗ ಘಟನೆಯ ಅಸಲಿಯತ್ತು ಬಯಲಾಗಿದೆ. ಹೇಮೇಂದ್ರ ಮೆರಾವಿ ವಿವಾಹವಾದ ಯುವತಿಯ ಮಾಜಿ ಪ್ರಿಯಕರನೇ ಈ ಕೃತ್ಯದ ಹಿಂದಿನ ರೂವಾರಿ. ಆರೋಪಿ ಸರಜೂ ಈ ವಿವಾಹಕ್ಕೆ ಬಂದು ವರನಿಗೆ ಹೋಮ್ ಥಿಯೇಟರ್ ಸಿಸ್ಟಮ್ ಅನ್ನು ಉಡುಗೊರೆಯಾಗಿ ನೀಡಿದ್ದ. ಅದರೊಳಗೆ ಆತ ಸ್ಫೋಟಕ ವಸ್ತು ಇಟ್ಟಿದ್ದ ಎಂದು ತಿಳಿದುಬಂದಿದೆ.
ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಹೋಮ್ ಥಿಯೇಟರ್ ಸಿಸ್ಟಂನಲ್ಲಿ ಯಾರೋ ಸ್ಫೋಟಕಗಳನ್ನು ಇಟ್ಟಿದ್ದರಿಂದ ಸ್ಫೋಟ ಸಂಭವಿಸಿದೆ ಎಂದು ತಿಳಿದು ಬಂದಿದೆ. ಬಳಿಕ ಪೊಲೀಸರು ಮದುವೆಯ ಸಮಯದಲ್ಲಿ ಪಡೆದ ಉಡುಗೊರೆಗಳ ಪಟ್ಟಿಯನ್ನು ತನಿಖೆ ಮಾಡಿದಾಗ ಮ್ಯೂಸಿಕ್ ಸಿಸ್ಟಮ್ ಅನ್ನು ವಧುವಿನ ಮಾಜಿ ಪ್ರೇಮಿಯು ಉಡುಗೊರೆಯಾಗಿ ನೀಡಿದ್ದ ಎಂದು ತಿಳಿದುಬಂದಿತ್ತು.
ಆದ್ದರಿಂದ ಸರಜೂವನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ತಾನು ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಪ್ರೇಯಸಿ ಬೇರೊಬ್ಬನನ್ನು ವಿವಾಹಗುತ್ತಿರುವುದರಿಂದ ಕೋಪಗೊಂಡು ಹೋಮ್ ಥಿಯೇಟರ್ ಸಿಸ್ಟಮ್ ನೊಳಗೆ ಸ್ಫೋಟಕ ವಸ್ತುವನ್ನು ಇಟ್ಟು ಅದನ್ನು ಉಡುಗೊರೆಯಾಗಿ ನೀಡಿದ್ದೇನೆಂದು ಆತ ತನಿಖೆಯ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಕಬೀರ್ಧಾಮ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮನೀಶಾ ಠಾಕೂರ್ ಹೇಳಿದ್ದಾರೆ.