ಕುದುರೆ ಸವಾರಿ ವಿಚಾರದಲ್ಲಿ ಬಾಲಕನ ಹತ್ಯೆ : ಮೂವರು ಕೊಲೆ ಆರೋಪಿಗಳು ಅರೆಸ್ಟ್
Monday, April 10, 2023
ಬೆಂಗಳೂರು: ಕುದುರೆಯಲ್ಲಿ ಕೂರಿಸುವ ವಿಚಾರಕ್ಕೆ ನಡೆದ ಜಗಳದಲ್ಲಿ ಅಪ್ರಾಪ್ತ ಬಾಲಕನನ್ನು ಕೊಲೆಗೈದಿರುವ ಆರೋಪದ ಮೇಲೆ ಮೂವರು ಆರೋಪಿಗಳನ್ನು ಕಾಡುಗೊಂಡನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಸತೀಶ್ (15) ಕೊಲೆಯಾದ ಅಪ್ರಾಪ್ತ ಬಾಲಕ. ಶೋಯೆಬ್, ಶರೀಫ್, ಹುಸೇನ್ ಕೊಲೆ ಆರೋಪಿಗಳು. ಬಾಲಕನ ಕೊಲೆಗೈದ ಆರೋಪದಡಿ ಇವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಎ.3ರಂದು ಕೆ.ಜಿ.ಹಳ್ಳಿ ರೈಲ್ವೆ ಹಳಿಯ ಬಳಿ ಬಾಲಕನನ್ನು ಕೊಲೆ ಮಾಡಲಾಗಿತ್ತು. ಬಾಲಕ ಸತೀಶ್ ಮಾಸ್ಕ್ ರಸ್ತೆಯಲ್ಲಿ ಕುದುರೆ ಇಟ್ಟುಕೊಂಡಿದ್ದು, ಮಕ್ಕಳನ್ನು ಅದರ ಮೇಲೆ ಕೂರಿಸಿ ಆಡಿಸುತ್ತಿದ್ದ. ಈ ವೇಳೆ ಶರೀಫ್ ಕುದುರೆ ಮೇಲೆ ಸವಾರಿ ಮಾಡಲು ಬಂದಿದ್ದಾನೆ. ಆದರೆ ದೊಡ್ಡವರನ್ನೆಲ್ಲ ಕುದುರೆ ಮೇಲೆ ಕೂರಿಸುವುದಿಲ್ಲ ಎಂದು ಸತೀಶ್ ಆತನಿಗೆ ಕುದುರೆ ಸವಾರಿ ಮಾಡಲು ನಿರಾಕರಿಸಿದ್ದಾನೆ. ಆಗ ಆತನು ಬಾಲಕನ ಕೆನ್ನೆಗೆ ಹೊಡೆದು ಹೋಗಿದ್ದಾನೆ. ಇದಾಗಿ ಕೆಲ ದಿನಗಳ ಬಳಿಕ ಹೊಟೇಲೊಂದರ ಬಳಿ ಶರೀಫ್‌ನನ್ನು ನೋಡಿದ್ದ ಬಾಲಕ ಸತೀಶ್ ಮತ್ತು ಆತನ ಸ್ನೇಹಿತರು, ಶರೀಫ್ ಮೇಲೆ ಹಲ್ಲೆ ಮಾಡಿದ್ದಾರೆ.
ಈ ಹಲ್ಲೆಗೆ ಪ್ರತಿಕಾರವಾಗಿ ಸತೀಶ್ ಕೊಲೆಗೆ ಈ ಶರೀಫ್ ಸಂಚು ಹೂಡಿದ್ದಾನೆ. ಅದರಂತೆ ಎಪ್ರಿಲ್ 3ರಂದು ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಸತೀಶ್‌ನನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ದೊಣ್ಣೆಗಳಿಂದ ಹೊಡೆದು ಶರೀಫ್ ಸೇರಿದಂತೆ ಮೂವರು ಕೊಲೆಮಾಡಿದ್ದಾರೆ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ. ಆದ್ದರಿಂದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.