-->
ಮಂಗಳೂರು: ಬನ್ನಂಜೆ ರಾಜಾ ಮೂರು ಶೂಟೌಟ್ ಪ್ರಕರಣದಲ್ಲಿ ದೋಷಮುಕ್ತ

ಮಂಗಳೂರು: ಬನ್ನಂಜೆ ರಾಜಾ ಮೂರು ಶೂಟೌಟ್ ಪ್ರಕರಣದಲ್ಲಿ ದೋಷಮುಕ್ತ


ಮಂಗಳೂರು: ನಗರದ ವಿವಿಧ ಠಾಣೆಗಾಳಲ್ಲಿ ದಾಖಲಾಗಿದ್ದ 3 ಶೂಟೌಟ್ ಪ್ರಕರಣಗಳಲ್ಲಿ ಬನ್ನಂಜೆ ರಾಜನನ್ನು ಖುಲಾಸೆಗೊಳಿಸಿ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿ ಆದೇಶಿಸಿದೆ.

2000ರಲ್ಲಿ ಬಂಟ್ಸ್ ಹಾಸ್ಟೆಲ್ ನಿವಾಸಿ ಇರವಿನ್ ಪಿಂಟೋ ಹಾಗೂ ಅವರ ಪತ್ನಿ ರಾತ್ರಿವೇಳೆ ಕಾರಿನಲ್ಲಿ ಬರುತ್ತಿದ್ದಾಗ ಹೊಯ್ಗೆಬಜಾರ್ ಬಳಿ ಬೈಕ್‌ನಲ್ಲಿ ಬಂದ ಅಪರಿಚಿತರು ಶೂಟೌಟ್ ಮಾಡಿ ಕೊಲೆಗೆತ್ನಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಬನ್ನಂಜೆ ರಾಜ ಮತ್ತು ಆತನ ಸಹಚರರ ಮೇಲೆ ಪ್ರಕರಣ ದಾಖಲಾಗಿತ್ತು. 2004ರಲ್ಲಿ ರೋಹನ್ ಕಾರ್ಪೋರೇಶನ್‌ ಮಾಲಕ ರೋಹನ್ ಮೊಂತೆರೊ ಅವರ ಕಚೇರಿಯ ಮೇಲೆ ಅಪರಿಚಿತರು ಗುಂಡು ಹಾರಿಸಿ, ಕೊಲೆಗೆತ್ನಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಕದ್ರಿ ಠಾಣೆಯಲ್ಲಿ ಬನ್ನಂಜೆ ರಾಜ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. 

ಅದೇ ರೀತಿ 2011 ರಲ್ಲಿ ಪೃಥ್ವಿ ಡೆವಲಪರ್ಸ್ ಮತ್ತು ಬಿಲ್ಡರ್ಸ್‌ ಮಾಲಕ ಸುರೇಶ ಭಂಡಾರಿ ತಮ್ಮ ಪತ್ನಿ ಮತ್ತು ಮಗಳೊಂದಿಗೆ ಕದ್ರಿ ಪಾರ್ಕ್ ಬಳಿ ಕಾರಿನಲ್ಲಿದ್ದ ಸಂದರ್ಭ ಇಬ್ಬರು ಅಪರಿಚಿತರು ಬೈಕ್‌ನಲ್ಲಿ ಬಂದು ರಿವಾಲ್ವರ್‌ನಿಂದ ಶೂಟೌಟ್ ಮಾಡಿ ಕೊಲೆಗೆತ್ನ ನಡೆಸಿದ್ದ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಮೂರೂ ಪ್ರಕರಣಗಳಲ್ಲಿ ಪೊಲೀಸರು ತನಿಖೆ ನಡೆಸಿ ಬನ್ನಂಜೆರಾಜ ಹಾಗೂ ಆತನ ಸಹಚರರ ಮೇಲೆ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಆದರೆ ಈ ಘಟನೆಗಳು ನಡೆದ ವೇಳೆ ಬನ್ನಂಜೆರಾಜ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ. 2015ರಲ್ಲಿ ಆಫ್ರಿಕಾದ ಮೊರಾಕೋ ದೇಶದಲ್ಲಿ ಆತನನ್ನು ಬಂಧಿಸಿ ಭಾರತಕ್ಕೆ ಹಸ್ತಾಂತರಿಸಲಾಗಿತ್ತು. ಆ ಬಳಿಕ ಆತನ ವಿರುದ್ಧ ದಾಖಲಾದ ಎಲ್ಲಾ ಪ್ರಕರಣಗಳಲ್ಲಿ ಪೊಲೀಸರು ಹೆಚ್ಚುವರಿ ತನಿಖೆ ನಡೆಸಿ ಹೆಚ್ಚುವರಿ ದೋಷಾರೋಪಣೆ ಪಟ್ಟಿಸಲ್ಲಿಸಿದ್ದರು.

ಈ ಮೂರೂ ಪ್ರಕರಣಗಳಲ್ಲಿ ವಿಚಾರಣೆ ನಡೆಸಿದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸಪ್ಪ ಬಾಲಪ್ಪ ಜಕಾತಿ ಅವರು ಬನ್ನಂಜೆ ರಾಜನನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದಾರೆ. ಆರೋಪಿ ಪರವಾಗಿ ಪಿಪಿ ಹೆಗ್ಡೆ ಅಸೋಸಿಯೇಟ್‌ನ ರಾಜೇಶ್‌ ಕುಮಾರ್ ಅಮಾಡಿ ಅವರು ವಾದಿಸಿದ್ದರು. ಬನ್ನಂಜೆರಾಜನ ವಿರುದ್ಧ ಒಂದು ನಕಲಿ ಪಾಸ್ ಪೋರ್ಟ್ ಹೊಂದಿದ್ದ ಬಗ್ಗೆ ಮತ್ತು ಒಂದು ಇಡಿ ಪ್ರಕರಣದ ತನಿಖೆ ಬಾಕಿ ಇರುತ್ತದೆ. ಮಂಗಳೂರಿನಲ್ಲಿ ಬನ್ನಂಜೆರಾಜನ ಮೇಲೆ ದಾಖಲಾಗಿದ್ದ ಉಳಿದ ಎಲ್ಲ ಪ್ರಕರಣಗಳನ್ನು ಕರ್ನಾಟಕ ಉಚ್ಚ ನ್ಯಾಯಾಲಯ ರದ್ದುಗೊಳಿಸಿದ್ದು ಹೈಕೋರ್ಟ್‌ನಲ್ಲಿ ವಕೀಲ ಪಿ.ಪಿಹೆಗ್ಡೆ ವಾದಿಸಿದ್ದರು.

Ads on article

Advertise in articles 1

advertising articles 2

Advertise under the article