ಕೈಕೊಟ್ಟ ಕಾಂಗ್ರೆಸ್ - ಮಂಗಳೂರು ಉತ್ತರದಿಂದ ಮೊಯ್ದಿನ್ ಬಾವ JDS ನಿಂದ ಸ್ಪರ್ಧೆ
Thursday, April 20, 2023
ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಮಾಜಿ ಶಾಸಕ ಮೊಯ್ದಿನ್ ಬಾವ ಅವರ ಕೈ ತಪ್ಪಿದೆ.ಇದರಿಂದ ಆಕ್ರೋಶಗೊಂಡಿರುವ ಶಾಸಕ ಮೊಯ್ದಿನ್ ಬಾವ ಅವರು ಜೆಡಿಎಸ್ ಸೇರ್ಪಡೆಗೊಂಡಿದ್ದು, ಮಂಗಳೂರು ಉತ್ತರದಿಂದ ಜೆಡಿಎಸ್ ಅಭ್ಯರ್ಥಿ ಯಾಗಿ ಕಣಕ್ಕಿಳಿಯಲಿದ್ದಾರೆ.
ಮಂಗಳೂರು ಉತ್ತರ ಕ್ಷೇತ್ರದ ಟಿಕೆಟನ್ನು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಆಪ್ತರಾಗಿರುವ ಉದ್ಯಮಿ ಇನಾಯತ್ ಆಲಿಗೆ ನೀಡಲಾಗಿದೆ.
ಈ ಬಗ್ಗೆ ಮೊಯ್ದಿನ್ ಬಾವಾ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿ, ಡಿ.ಕೆ.ಶಿವಕುಮಾರ್ ನನ್ನ ಟಿಕೆಟ್ ಕೈತಪ್ಪಲು ನೇರ ಹೊಣೆಯಾಗಿದ್ದು, ಅವರು ಟಿಕೆಟ್ ಅನ್ನು ಮಾರಾಟ ಮಾಡಿದ್ದಾರೆ. ನಾನೇನು ತಪ್ಪು ಮಾಡಿದ್ದೇನೆ ಡಿಕೆಶಿಯವರೇ, ನನ್ನನ್ನು ವೈರಿಯಾಗಿ ಕಾಡಿ, ಎಲ್ಲೂ ಈವರೆಗೆ ಕಾಣದ ಇನಾಯತ್ ಅಲಿಗೆ ಟಿಕೆಟ್ ಕೊಟ್ಟಿದ್ದೀರಿ. ಇನಾಯತ್ ಅಲಿ ಬಿಜೆಪಿ ವಿರುದ್ಧ ಹೋರಾಟ ಮಾಡುವುದಲ್ಲ. ಮೊಯ್ದಿನ್ ಬಾವಾರ ಕಾರ್ಯಕರ್ತರನ್ನು, ಅಭಿಮಾನಿಗಳನ್ನು ವಿಭಾಗ ಮಾಡಿ ಹಣದ ಆಮಿಷವೊಡ್ಡಿ ಹೊರಗಡೆಯವರನ್ನು ತಂದು ಪ್ರಚಾರ ಮಾಡಲು ಆರಂಭಿಸಿದ್ದಾರೆ. ನನ್ನ ಟಿಕೆಟ್ ಕೈತಪ್ಪಲು ಕರಾವಳಿ ಭಾಗದಲ್ಲಿ ಏಕಾಂಗಿ ಶಾಸಕನೆಂದು ಬೀಗುತ್ತಿರುವ ಮಾನ್ಯರೊಬ್ಬರು ಕಾರಣ ಎಂದು ಯು.ಟಿ.ಖಾದರ್ ಅವರ ಹೆಸರು ಹೇಳದೆ ಕಿಡಿಕಾರಿದರು. ಅದೇ ರೀತಿ ಶಿವಮೊಗ್ಗದಲ್ಲಿ ಪಕ್ಷವನ್ನು ಮುಳುಗಿಸಿ ಈಗ ಎಂಎಲ್ ಸಿ ಆದವರೊಬ್ಬರೂ ಇದರಲ್ಲಿ ಸೇರಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ರಾಹುಲ್ ಗಾಂಧಿಯವರು ಮಾಡಿರುವ ಸರ್ವೇಯನ್ನು 7% ಜನರಿಗೆ ಕೊಡುವಂತಹ ಕಾರ್ಯ ಆಗುತ್ತಿದೆ. ಡಿಕೆಶಿಯೊಬ್ಬರನ್ನು ಬಿಟ್ಟು ಸಿದ್ದರಾಮಯ್ಯ ಸೇರಿದಂತೆ ಸಿಸಿ ಕಮಿಟಿಯ ಎಲ್ಲರ ಆಶೀರ್ವಾದ ನನಗಿದೆ. ಆದರೆ ಇದೀಗ ಕಾರ್ಯಕರ್ತರ ಒತ್ತಡದಂತೆ ನಾನು ಜೆಡಿಎಸ್ ಪಕ್ಷ ಸೇರುತ್ತಿದ್ದೇನೆ. ಆದ್ದರಿಂದ ಈ ರಾಜ್ಯದಲ್ಲಿ ಅತ್ಯುತ್ತಮ ನಾಯಕ, ಒಳ್ಳೆಯ ಮನಸ್ಥಿತಿಯಿರುವ ಡಿ.ಕೆ.ಕುಮಾರಸ್ವಾಮಿಯವರ ಆಶೀರ್ವಾದವನ್ನು ಇಂದು ಬೆಳಗ್ಗೆ ಪಡೆದು ಜೆಡಿಎಸ್ ಸೇರ್ಪಡೆಗೊಂಡಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ನೋವಿನಲ್ಲಿ ಬಹಿರಂಗವಾಗಿ ರಾಜಿನಾಮೆ ಸಲ್ಲಿಸಿರುವ ನಾನು ಇಂದು ಮಧ್ಯಾಹ್ನ 1 ಗಂಟೆಗೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಮೊಯ್ದಿನ್ ಬಾವಾ ಹೇಳಿದರು.