ನಾನ್ಯಾಕೆ BJP ತೊರೆದು ಕಾಂಗ್ರೆಸ್ ಸೇರಿದೆ- Facebook ಪೋಸ್ಟ್ ಹಾಕಿದ ಜಗದೀಶ್ ಶೆಟ್ಟರ್
Monday, April 17, 2023
ಬಿಜೆಪಿ ಪಕ್ಷದ ಹಿರಿಯ ಮುಖಂಡರಾಗಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಇಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಅವರು ಬಿಜೆಪಿ ಯಾಕೆ ಬಿಟ್ಟರು?ಕಾಂಗ್ರೆಸ್ ಯಾಕೆ ಸೇರಿದರು ಎಂಬುದನ್ನು ಫೇಸ್‌ಬುಕ್ ಪೋಸ್ಟ್ ಮೂಲಕ ತಿಳಿಸಿದ್ದಾರೆ. ಅವರ ಫೇಸ್ ಬುಕ್ ಪೋಸ್ಟ್ ಈ ಕೆಳಗಿನಂತಿದೆ
ಇಂದು ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದೇನೆ. ಅನೇಕರಿಗೆ ಆಶ್ಚರ್ಯವಾಗಿರಬಹುದು. ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕರಾಗಿದ್ದವರು ಕಾಂಗ್ರೆಸ್ ಸೇರುತ್ತಿರುವುದೇಕೆ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತಿದೆ. ಅನೇಕ ತಿಂಗಳಿಂದ ಹಿರಿಯ ನಾಯಕನಾಗಿ ನನಗೆ ಆಗಿರುವ ವೇದನೆ ಯಾರೂ ಅರ್ಥ ಮಾಡಿಕೊಂಡಿಲ್ಲ. ನಾನು ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದ್ದೆ. ಉತ್ತರ ಕರ್ನಾಟಕದಲ್ಲಿ ಪಕ್ಷಕ್ಕೆ ಸಂಘಟನೆ ಮಾಡಿದ್ದೆ. ಬಿಜೆಪಿ ನನಗೆ ಕೊಟ್ಟ ಸ್ಥಾನಮಾನ, ಅಧಿಕಾರಕ್ಕೆ ಪ್ರತಿಯಾಗಿ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷ ಕಟ್ಟಿ ಬೆಳೆಸಿದ್ದೇನೆ. ಹುಬ್ಬಳ್ಳಿ ಯಲ್ಲಿ 6 ಬಾರಿ ಶಾಸಕನಾಗಿ ಗೆದ್ದಿದ್ದೇನೆ. ಈಗ 7ನೇ ಬಾರಿ ಸ್ಪರ್ಧೆ ಮಾಡಲಿದ್ದೇನೆ.
ಕಳೆದ 2 ವರ್ಷಗಳಿಂದ ಕ್ಷೇತ್ರದಲ್ಲಿ ಹೋರಾಡುತ್ತಿದ್ದೇನೆ. ನನಗೆ ಟಿಕೆಟ್ ಇಲ್ಲ ಎಂದಾಗ ನನಗೆ ಆಘಾತವಾಯಿತು. ಹಿರಿಯ ನಾಯಕನಿಗೆ ನೀಡಬೇಕಾದ ಗೌರವ ನೀಡಿಲ್ಲ ಎಂಬುದು ನೋವಾಗಿದೆ. ನಾನು ಚುನಾವಣೆ ನಿಲ್ಲುವುದು ಬೇಡವಾಗಿದ್ದರೆ ಒಂದು ವಾರ ಮುಂಚಿತವಾಗಿ ಹೇಳಿ ಮಾತುಕತೆ ನಡೆಸಿದ್ದರೆ ನಾನು ಅದಕ್ಕೆ ಒಪ್ಪುತ್ತಿದ್ದೆ. ನಾನು ಎಂದಿಗೂ ಅಧಿಕಾರಕ್ಕಾಗಿ ರಾಜಕಾರಣ ಮಾಡಿಲ್ಲ. ನಾನು ಸಂಘ ಪರಿವಾರದಿಂದ ಬಂದಿರುವ ವ್ಯಕ್ತಿ. ನನ್ನನ್ನು ಯಾಕೆ ಕಡೆಗಣಿಸಲಾಗುತ್ತಿದೆ ಎಂದು ಅರ್ಥವಾಗಿಲ್ಲ. ನನಗೆ ಜನರ ಆಶೀರ್ವಾದವಿದೆ ನಾನು ಹಠಕ್ಕೆ ಬಿದ್ದು ಗೆಲ್ಲುವ ಅಗತ್ಯವಿಲ್ಲ. ನಾಮಪತ್ರ ಸಲ್ಲಿಸುವ ಹಿಂದಿನ ದಿನ ನನಗೆ ಟಿಕೆಟ್ ಇಲ್ಲ ಎಂದು ಹೇಳಿ, ಸಣ್ಣ ಹುಡುಗನಂತೆ ನಡೆಸಿಕೊಂಡರೆ ನನಗೆ ಹೇಗೆ ಭಾಸವಾಗಬೇಕು. ಇದರಿಂದ ಬಹಳ ಬೇಸರವಾಯಿತು. ನನ್ನ ಅಭಿಮಾನಿಗಳು, ಹಿತೈಶಿಗಳು ಬಂದು ನನಗೆ ಆಗಿರುವ ಅಪಮಾನಕ್ಕೆ ಬೇಸರ ಮಾಡಿಕೊಂಡರು. ನನ್ನ ಜನರ ಸ್ವಾಭಿಮಾನಕ್ಕೆ ಧಕ್ಕೆಯಾದ ಹಿನ್ನೆಲೆಯಲ್ಲಿ ನಮ್ಮ ಹಿತೈಶಿ, ಜನರ ಅಭಿಪ್ರಾಯ ಪಡೆದು ಈ ತೀರ್ಮಾನ ಮಾಡಿದ್ದೇನೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ನನ್ನನ್ನು ಸಂಪರ್ಕಿಸಿ ಕಾಂಗ್ರೆಸ್ ಸೇರುವಂತೆ ಕರೆದರು. ನಾವು ಕಟ್ಟಿ ಬೆಳೆಸಿದ ಮನೆಯಿಂದ ನಮ್ಮನ್ನು ಹೊರ ದಬ್ಬಿದಾಗ ನಾನು ಸಹಜವಾಗಿ ಕಾಂಗ್ರೆಸ್ ಪಕ್ಷ ಸಿದ್ಧಾಂತ ನಂಬಿ ಬಹಳ ಸಂತೋಷದಿಂದ ಕಾಂಗ್ರೆಸ್ ಸೇರುತ್ತಿದ್ದೇನೆ.
ನಾವು ಬಿಜೆಪಿಯಲ್ಲಿ ವ್ಯಕ್ತಿ ಮುಖ್ಯವಲ್ಲ ಪಕ್ಷ ಮುಖ್ಯ ಎಂದು ಕೆಲಸ ಮಾಡಿದ್ದೆವು. ಆದರೆ ಇಂದು ಕೆಲವು ವ್ಯಕ್ತಿಗಳಿಗಾಗಿ ಪಕ್ಷವನ್ನು ಕಟ್ಟಲಾಗುತ್ತಿದೆ. ಬಿಜೆಪಿ ಕಚೇರಿಯಲ್ಲಿ ಕೆಲವು ವ್ಯಕ್ತಿಗಳು ನಿಯಂತ್ರಿಸುತ್ತಿದ್ದಾರೆ. ಈ ವಿಚಾರ ಕೇಂದ್ರದ ನಾಯಕರ ಗಮನಕ್ಕೆ ಬಂದಿಲ್ಲ. ಕೆಲವು ವ್ಯಕ್ತಿಗಳ ಹಿತಾಸಕ್ತಿಗಾಗಿ ಬೇರೆಯವರಿಗೆ ಅವಮಾನ ಮಾಡಲಾಗುತ್ತಿದೆ. ನನಗೆ ಅಪಮಾನ ಮಾಡಿದ ನಂತರ ನನಗೆ ಬೇರೆ ಹುದ್ದೆ ನೀಡುವುದಾಗಿ ಹೇಳಿದರು.
ನನಗೆ ಅಧಿಕಾರ ಮುಖ್ಯವಾಗಿದ್ದರೆ, ಬೊಮ್ಮಾಯಿ ಅವರ ಸರ್ಕಾರದಲ್ಲಿ ನನಗೆ ಮಂತ್ರಿ ಸ್ಥಾನ ಬೇಡ ಎಂದು ಸ್ವಯಂಕೃತ ಹೇಳಿಕೆ ನೀಡಿದ್ದೆ. ಅಧಿಕಾರ ಬೇಕಾಗಿದ್ದರೆ ಆಗಲೇ ಹಠಮಾಡಿ ಮಂತ್ರಿಗಿರಿ ಪಡೆಯುತ್ತಿದ್ದೆ. ಕೊನೆಯದಾಗಿ ನನಗೆ ಅಪಮಾನವಾಗಿದ್ದು, ಅದನ್ನು ಸರಿಪಡಿಸಲು ಶಾಸಕರಾಗಿ ಸ್ಪರ್ಧಿಸುತ್ತೇನೆ. ಆರು ತಿಂಗಳ ನಂತರ ಗೌರವಯುತವಾಗಿ ರಾಜೀನಾಮೆ ನೀಡುತ್ತೇನೆ ನಂತರ ನೀವು ಯಾರನ್ನು ಬೇಕಾದರೂ ಶಾಸಕರನ್ನಾಗಿ ಮಾಡಿಕೊಳ್ಳಿ ಎಂದು ಹೇಳಿದೆ ಆದರೂ ಅವರ ಒಪ್ಪಲಿಲ್ಲ. ನನ್ನನ್ನು ರಾಜಕೀಯವಾಗಿ ಗೌರವಯುತವಾಗಿ ಕಳುಹಿಸಿ ಎಂದು ಕೇಳಿದರೂ ಅದಕ್ಕೆ ಅವಕಾಶ ನೀಡಲಿಲ್ಲ.
ನನಗೆ ಯಡಿಯೂರಪ್ಪನವರ ಮೇಲೆ ಬಹಳ ಗೌರವವಿದೆ. ನಾನು ಬಿಜೆಪಿಗೆ ರಾಜೀನಾಮೆ ನೀಡುತ್ತೇನೆ ಎಂದಾಗ ರಾಜ್ಯದ ಎಲ್ಲಾ ಭಾಗದ ಲಿಂಗಾಯತ ಸಮುದಾಯದ ನಾಯಕರು ನನಗೆ ಕರೆ ಮಾಡಿ ನಿಮಗೆ ಬಿಜೆಪಿಯಲ್ಲಿ ಅನ್ಯಾಯವಾಗಿದ್ದು ಯಾಕೆ? ಎಂದು ಬೇಸರ ವ್ಯಕ್ತಪಡಿಸಿದರು. ಈ ಸಮುದಾಯ ಹಾಗೂ ಹುಬ್ಬಳ್ಳಿ ಧಾರವಾಡ ಭಾಗದ ಜನರ ಪ್ರೀತಿ ವಿಶ್ವಾಸಕ್ಕೆ ಋಣಯಾಗಿರುತ್ತೇನೆ.
ರಾಜ್ಯದಲ್ಲಿ ಇಂದು ಬದಲಾವಣೆಯ ದಿನವಾಗಿದ್ದು, ನಾನು ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ.
- ಜಗದೀಶ್ ಶೆಟ್ಟರ್