ಬಿಜೆಪಿಯಲ್ಲಿ ಬಂಡಾಯದ ಸುನಾಮಿ: ಸವದಿ, ಸೊಗಡು, ಶೆಟ್ಟರ್, ಅಂಗಾರ...
ಬಿಜೆಪಿಯಲ್ಲಿ ಬಂಡಾಯದ ಸುನಾಮಿ: ಸವದಿ, ಸೊಗಡು, ಶೆಟ್ಟರ್, ಅಂಗಾರ...
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತಲೇ ಕಮಲ ಪಾಳಯದಲ್ಲಿ ಬಂಡಾಯದ ಸುನಾಮಿ ಎದ್ದಿದೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಂದ ಹಿಡಿದು ಸಚಿವ ಸುಳ್ಯದ ಅಂಗಾರ ಅವರ ವರೆಗೆ ಹಿರಿಯ ಕಿರಿಯ ನಾಯಕರು ಅಭ್ಯರ್ಥಿಗಳ ಪಟ್ಟಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ರಾಜೀನಾಮೆ ನೀಡಿದ ಕ್ಷಣಾರ್ಧದಲ್ಲೇ ಮಾಜಿ ಸಚಿವ ಆರ್. ಶಂಕರ್ ಕಮಲ ಪಾಳಯಕ್ಕೆ ಗುಡ್‌ಬೈ ಹೇಳಿದ್ದಾರೆ. ಪರಿಷತ್ ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ.
ಚುನಾವಣಾ ನಿವೃತ್ತಿ ಘೋಷಿಸಿದ ಈಶ್ವರಪ್ಪ ಅವರ ನಿರ್ಧಾರದ ಬೆನ್ನಲ್ಲೇ ಶಿವಮೊಗ್ಗ ಮಹಾನಗರ ಪಾಲಿಕೆಯ 19 ಸದಸ್ಯರು ದಿಢೀರ್ ರಾಜೀನಾಮೆ ಘೋಷಿಸಿದ್ದಾರೆ.
ಮಹಾನಗರ ಪಾಲಿಕೆಯ ಮೇಯರ್ ಶಿವಕುಮಾರ್, ಉಪ ಮೇಯರ್ ಲಕ್ಷ್ಮಿ ಶಂಕರ್ ನಾಯಕ್ ಕೂಡ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ್ದು, ಈಶ್ವರಪ್ಪ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ.
ತುಮಕೂರು ಜಿಲ್ಲೆಯ ಪ್ರಭಾವಿ ಲಿಂಗಾಯಿತ ಮುಖಂಡ ಸೊಗಡು ಶಿವಣ್ಣ ಅವರು ಕೂಡ ಪಕ್ಷಕ್ಕೆ ರಾಜೀನಾಮೆ ಬಿಸಾಕಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಧುಮುಕುವ ಘೋಷಣೆ ಮಾಡಿರುವ ಸೊಗಡು ತಮ್ಮ ಅಭಿಮಾನಿ, ಬೆಂಬಲಿಗರಿಗೆ ಬಿಜೆಪಿ ತೊರೆಯುವಂತೆ ಕರೆ ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪಕ್ಷಾಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರ ಜೊತೆಗೆ ಮಾತುಕತೆ ನಡೆಸಿದ್ದು, ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ, ಸುಬ್ರಹ್ಮಣ್ಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ದೇವಾಲಯಕ್ಕೆ ಆಗಮಿಸಿದರೂ ಅವರ ಸ್ವಾಗತಕ್ಕೆ ಗೈರುಹಾಜರಾಗಿ ಸಚಿವ ಅಂಗಾರ ಮುನಿಸಿಕೊಂಡಿದ್ದಾರೆ. ತಾವು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸುವುದಿಲ್ಲ ಎಂದು ಖಡಕ್ ಆಗಿ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಉಡುಪಿ: ಬಿಜೆಪಿಯ ಪಕ್ಷದ ಟಿಕೆಟ್ ಸಿಕ್ಕಿಲ್ಲ ಎಂದು ಬಿಜೆಪಿ ಶಾಸಕ ರಘುಪತಿ ಭಟ್ ನೊಂದುಕೊಂಡಿದ್ದಾರೆ. ಮೊದಲೇ ಹೇಳಿದ್ದರೆ ಈಶ್ವರಪ್ಪ ಅವರ ರೀತಿಯಲ್ಲಿ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸುತ್ತಿದ್ದೆ. ಆದರೆ, ಪಕ್ಷ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅವಮಾನ ಮಾಡಿದೆ ಎಂದು ನೊಂದುಕೊಂಡಿದ್ದಾರೆ.
ಪುತ್ತೂರಿನಲ್ಲೂ ಬಿಜೆಪಿಯಲ್ಲಿ ಬಂಡಾಯ ತಾರಕಕ್ಕೇರಿದೆ. ಅರುಣ ಕುಮಾರ್ ಪುತ್ತಿಲ ತಮ್ಮ ಬೆಂಬಲಿಗರ ಸಭೆ ನಡೆಸಿದ್ದು, ಟಿಕೆಟ್ ವಂಚಿತರಾದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಶಾಸಕ ಕುಮಾರಸ್ವಾಮಿ ಅವರಿಗೆ ಖೊಕ್ ನೀಡಿದ್ದು, ಬೈಂದೂರಿನಲ್ಲಿ ಸುಕುಮಾರ ಶೆಟ್ಟಿ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ.