ಗೋವಾದಲ್ಲಿ ಮತ್ತಿಬ್ಬರು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರ್ಪಡೆ : ಅಮಿತ್ ಪಾಲೇಕರ್
Thursday, April 6, 2023
ಪಣಜಿ: ಗೋವಾ ಕಾಂಗ್ರೆಸ್ ಪಕ್ಷದ ಇಬ್ಬರು ಶಾಸಕರು ಶೀಘ್ರದಲ್ಲೇ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಅಮಿತ್ ಪಾಲೇಕರ್ ಹೇಳಿದ್ದಾರೆ.
ಪಣಜಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ನಾಯಕ ಬಿ.ಎಲ್.ಸಂತೋಷ್ ಕಳೆದ ಕೆಲ ದಿನಗಳ ಹಿಂದೆ ಗೋವಾಕ್ಕೆ ಆಗಮಿಸಿದ್ದರು. ಕಾಂಗ್ರೆಸ್ ಪಕ್ಷದ ಮೂವರು ಶಾಸಕರ ಪೈಕಿ ಇಬ್ಬರು ಶಾಸಕರು ಬಿಜೆಪಿ ಸೇರಿದಾಗ ಮಾತ್ರ ಅನರ್ಹಗೊಳಿಸುವುದಿಲ್ಲ ಎಂಬ ಸೂಚನೆಯನ್ನು ರಾಜ್ಯ ಬಿಜೆಪಿ ನಾಯಕರಿಗೆ ನೀಡಿದ್ದರು ಎನ್ನಲಾಗಿದೆ. ಇದನ್ನೆಲ್ಲ ಗಮನಿಸಿದರೆ ಕಾಂಗ್ರೆಸ್ ಪಕ್ಷದ ಇಬ್ಬರು ಶಾಸಕರು ಶೀಘ್ರದಲ್ಲಿಯೇ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದರು.
ಈ ಸಂದರ್ಭ ಉಪಸ್ಥಿತರಿದ್ದ ಆಮ್ ಆದ್ಮಿ ಪಕ್ಷದ ನಾಯಕ ವಾಲ್ಮಿಕಿ ನಾಯಕ್ ಮಾತನಾಡಿ, ಕಳೆದ 6 ವರ್ಷಗಳಲ್ಲಿ ಕಾಂಗ್ರೆಸ್ ಶಾಸಕರ ಪಕ್ಷಾಂತರ ಮಾಡಿರುವುದನ್ನು ಗಮನಿಸಿದರೆ 28 ಜನ ಕಾಂಗ್ರೆಸ್ ಶಾಸಕರ ಪೈಕಿ 24 ಜನ ಶಾಸಕರು ಬಿಜೆಪಿ ಸೇರಿದ್ದಾರೆ. ಅಲ್ದೋಣ ಕ್ಷೇತ್ರದ ಕಾಂಗ್ರೇಸ್ ಶಾಸಕ ಪೆರೆರಾ ಬಿಜೆಪಿ ಪಕ್ಷದ ಪರ ಕೆಲಸ ಮಾಡುತ್ತಿದ್ದಾರೆ ಎಂಬುದಕ್ಕೆ ಹಲವು ದಾಖಲೆಗಳಿವೆ. ಗೋವಾ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷದಿಂದ ಬೇರೆ ಪಕ್ಷಕ್ಕೆ ಪಕ್ಷಾಂತರ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು. ಆದರೆ ಚುನಾವಣೆಯಲ್ಲಿ ಜಯಗಳಿಸಿದ ಬಳಿಕ ಬಿಜೆಪಿ ಸೇರ್ಪಡೆಯಾದರು ಎಂದರು. ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ವೆಂಗಿ ವಿಯೇಗಾಸ್ ಉಪಸ್ಥಿತರಿದ್ದರು.