ಉಡುಪಿಯಲ್ಲಿ BJP ಯಿಂದ ಪ್ರಮೋದ್ ಮಧ್ವರಾಜ್ ಗೆ ಟಿಕೆಟ್?
Monday, April 10, 2023
ಉಡುಪಿ: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ತಿಂಗಳಷ್ಟೆ ಬಾಕಿ ಇದೆ. ಆದರೆ ಬಿಜೆಪಿ ಇನ್ನೂ ಕೂಡ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಇದರ ನಡುವೆ ಉಡುಪಿ ಕ್ಷೇತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ.
ಉಡುಪಿ ಬಿಜೆಪಿ ಶಾಸಕ ರಘುಪತಿ ಭಟ್ ಗೆ ಈ ಬಾರಿ ಟಿಕೆಟ್ ತಪ್ಪಲಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. ರಘುಪತಿ ಭಟ್ ಅವರ ಸ್ಥಾನಕ್ಕೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅಭ್ಯರ್ಥಿಯಾಗಲಿದ್ದಾರೆ ಎಂದು ಚರ್ಚೆಯಾಗುತ್ತಿದೆ.
ರಘುಪತಿ ಭಟ್ ಅವರಿಗೆ ಟಿಕೆಟ್ ಮಿಸ್ ಆದರೆ ಉಡುಪಿಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ನಾಲ್ಕು ಮಂದಿ ಆಕಾಂಕ್ಷಿಗಳಿದ್ದಾರೆ. ಉಡುಪಿಯಲ್ಲಿ ಈ ಹಿಂದೆ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಸಚಿವರಾಗಿದ್ದ ಪ್ರಮೋದ್ ಮಧ್ವರಾಜ್ ಟಿಕೆಟ್ ಪಡೆಯಲು ಬಾರಿ ಕಸರತ್ತು ನಡೆಸುತ್ತಿದ್ದಾರೆ. ಬಿಜೆಪಿ ವರಿಷ್ಠರ ಮಟ್ಟದಲ್ಲಿ ಟಿಕೆಟ್ ಗಾಗಿ ದುಂಬಾಲು ಬಿದ್ದಿದ್ದಾರೆ. ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಬೀರುತ್ತಿರುವುದರಿಂದ ಈ ಬಾರಿಯ ಬಿಜೆಪಿ ಟಿಕೆಟ್ ಪಡೆಯುವಲ್ಲಿ ಅವರು ಯಶಸ್ವಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನೂ ಪ್ರಮೋದ್ ಮಧ್ವರಾಜ್ ಜೊತೆಗೆ ಯಶ್ ಪಾಲ್ ಸುವರ್ಣ, ವಿಜಯ ಕೊಡವೂರು, ಸುಪ್ರಸಾದ್ ಶೆಟ್ಟಿ ಬೈಕಾಡಿ ಟಿಕೆಟ್ ಗಾಗಿ ಪ್ರಯತ್ನ ಮುಂದುವರಿಸಿದ್ದಾರೆ. ಬಿಜೆಪಿ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೆ ಎಂಬುದು ಕುತೂಹಲ ಮೂಡಿಸಿದೆ.