ದಕ್ಷಿಣ ಕನ್ನಡ ದಲ್ಲಿ ಈ ಇಬ್ಬರು BJP ಶಾಸಕರು ಟಿಕೆಟ್ ಕಳೆದುಕೊಳ್ಳುವುದು ಪಕ್ಕಾ!
Saturday, April 8, 2023
ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಘೋಷಣೆಯಾಗಿಲ್ಲ. ಬಿಜೆಪಿ ಹೈಕಮಾಂಡ್ ಘೋಷಿಸುವ ಪಟ್ಟಿಗೆ ಆಕಾಂಕ್ಷಿಗಳು ಕಾಯುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಂಟು ಕ್ಷೇತ್ರದಲ್ಲಿ ಏಳು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದ್ದರು. 2018 ರಲ್ಲಿ ವಿಜಯಿಯಾದ ಏಳು ಮಂದಿ ಶಾಸಕರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ, ಮೂಡಬಿದಿರೆ ಶಾಸಕ ಉಮನಾಥ ಕೋಟ್ಯಾನ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ , ಪುತ್ತೂರು ಕ್ಷೇತ್ರದ ಶಾಸಕ ಸಂಜೀವ ಮಠಂದೂರು, ಸುಳ್ಯ ಕ್ಷೇತ್ರದ ಶಾಸಕ ಅಂಗಾರ ಮತ್ತೊಮ್ಮೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಆದರೆ ಏಳು ಮಂದಿ ಶಾಸಕರಲ್ಲಿ ಎರಡರಿಂದ ಮೂರು ಶಾಸಕರಿಗೆ ಟಿಕೆಟ್ ಈ ಬಾರಿ ಸಿಗುವುದು ಅನುಮಾನವಾಗಿದೆ. ಅದರಲ್ಲಿಯೂ ಇಬ್ಬರು ಶಾಸಕರು ಟಿಕೆಟ್ ಕಳೆದುಕೊಳ್ಳುವುದು ಪಕ್ಕಾ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ಪುತ್ತೂರು ಶಾಸಕರಿಗೆ ಟಿಕೆಟ್ ಇಲ್ಲ?
ಪುತ್ತೂರು ಶಾಸಕ ಸಂಜೀವ ಮಠಂದೂರು ಅವರಿಗೆ ಟಿಕೆಟ್ ಕೈತಪ್ಪುವುದು ಪಕ್ಕಾ ಎಂದು ತಿಳಿದುಬಂದಿದೆ. ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ ಅವರ ಸಂಬಂಧಿಕರು ಆಗಿರುವ ಸಂಜೀವ ಮಠಂದೂರು ಈ ಹಿಂದೆ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 2018 ರಲ್ಲಿ ಸಂಜೀವ ಮಠಂದೂರು ಅವರಿಗೆ ಪುತ್ತೂರು ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿತ್ತು. ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಮಾಜಿ ಶಾಸಕಿ ಶಕುಂತಳ ಶೆಟ್ಟಿ ಅವರನ್ನು ಪರಾಭವಗೊಳಿಸಿ ಸಂಜೀವ ಮಠಂದೂರು ಜಯ ಗಳಿಸಿದ್ದರು. ಆದರೆ ಸಂಜೀವ ಮಠಂದೂರು ಶಾಸಕರಾದ ಬಳಿಕ ಕಾರ್ಯಕರ್ತರ ವಿರೋಧವನ್ನು ಕಟ್ಟಿಕೊಂಡಿದ್ದಾರೆ. ಪುತ್ತೂರು ಕ್ಷೇತ್ರದಲ್ಲಿ ಅವರಿಗೆ ಟಿಕೆಟ್ ಕೊಡಬಾರದು, ಅರುಣ್ ಕುಮಾರ್ ಪುತ್ತಿಲ ಗೆ ಟಿಕೆಟ್ ನೀಡಬೇಕೆಂದು ಅಭಿಯಾನವು ನಡೆದಿತ್ತು. ಪುತ್ತೂರಿಗೆ ಅಮಿತ್ ಶಾ ಬಂದ ಸಂದರ್ಭದಲ್ಲಿ ಇದು ತಾರಕಕ್ಕೇರಿತ್ತು. ಇದರ ನಡುವೆ ಈ ವಾರದಲ್ಲಿ ನಡೆದ ಬೆಳವಣಿಗೆಯಿಂದ ಪಕ್ಷಕ್ಕೆ ಮುಜುಗರವಾಗಿತ್ತು. ಇವೆಲ್ಲದರ ಬಗ್ಗೆ ತಿಳಿದುಕೊಂಡಿರುವ ಹೈಕಮಾಂಡ್ ಸಂಜೀವ ಮಠಂದೂರು ಅವರಿಗೆ ಟಿಕೆಟ್ ನೀಡದಿರಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಸಚಿವ ಅಂಗಾರರಿಗೂ ಟಿಕೆಟ್ ಇಲ್ಲ?
ಸುಳ್ಯ ಕ್ಷೇತ್ರದಲ್ಲಿ ಆರು ಬಾರಿ ಶಾಸಕರಾದ ಅಂಗಾರ ಅವರಿಗೂ ಈ ಬಾರಿ ಟಿಕೆಟ್ ಇಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ. ಸುಳ್ಯ ಮೀಸಲು ಕ್ಷೇತ್ರದಿಂದ ಸತತವಾಗಿ 6 ಬಾರಿ ಗೆಲ್ಲುತ್ತಾ ಬಂದ ಅಂಗಾರ ಕ್ಷೇತ್ರ ವನ್ನು ಅಭಿವೃದ್ಧಿ ಮಾಡಿಲ್ಲ ಎಂಬುದು ಕ್ಷೇತ್ರದ ಜನರ ಆಕ್ರೋಶವಿದೆ. ಅಂಗಾರ ಸಚಿವರಾದರೂ ಕ್ಷೇತ್ರ ಅಭಿವೃದ್ಧಿ ಆಗಿಲ್ಲ ಎನ್ನುವುದು ಆರೋಪ ಇದೆ.ಆದ ಕಾರಣ ಈ ಬಾರಿ ಅಂಗಾರ ಅವರಿಗೆ ಟಿಕೆಟ್ ನೀಡದಿರಲು ಹೈಕಮಾಂಡ್ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಇದನ್ನು ಓದಿ: ದಕ್ಷಿಣ ಕನ್ನಡದಲ್ಲಿ ಈ ಮೂವರಿಗೆ BJP ಟಿಕೆಟ್ ಖಚಿತ