ಪತ್ನಿಯ ವಿರುದ್ಧ ಮತಾಂತರಕ್ಕೆ ಯತ್ನದ ಕೇಸು ದಾಖಲಿಸಿದ ಹಿಂದೂ ಪತಿ
Saturday, April 1, 2023
ಉತ್ತರಪ್ರದೇಶ: ಕೆಲ ತಿಂಗಳ ಹಿಂದೆ ಮುಸ್ಲಿಂ ಯುವತಿಯನ್ನು ವಿವಾಹವಾಗಿದ್ದ 26ರ ಹಿಂದೂ ಯುವಕನೊಬ್ಬ ಇಸ್ಲಾಂ ಧರ್ಮವನ್ನು ಸ್ವೀಕರಿಸುವಂತೆ ತನ್ನ ಪತ್ನಿ ಮತ್ತು ಸಂಬಂಧಿಕರು ಒತ್ತಾಯಿಸುತ್ತಿದ್ದಾರೆಂದು ಆರೋಪಿಸಿ ಉತ್ತರ ಪ್ರದೇಶ ಪೊಲೀಸರಿಗೆ ದೂರು ನೀಡಿದ್ದಾನೆ.
ಫರೀದ್‌ಪುರ ಗ್ರಾಮದ ನಿವಾಸಿ ಅಜಯ್‌ಕುಮಾರ್ ಸಿಂಗ್ ಹಾಗೂ ಜುಲುಪುರ್ ಗ್ರಾಮದ ಮುಸ್ಕಾನ್ ಎಂಬಾಕೆ ಡಿಸೆಂಬರ್‌ನಲ್ಲಿ ತಮ್ಮ ಕುಟುಂಬದ ಸಮ್ಮತಿಯಿಲ್ಲದೆ ವಿವಾಹವಾಗಿದ್ದರು. ಆ ಬಳಿಕ ಅಜಯ್ ಕುಮಾರ್ ಸಿಂಗ್ ಹಾಗೂ ಮುಸ್ಕಾನ್ ಜೊತೆಯಾಗಿ ವಾಸಿಸಲು ಆರಂಭಿಸಿದ್ದಾರೆ. ಆದರೆ ಮಾರ್ಚ್ 26 ರಂದು ಮನೆಯಲ್ಲಿ ಮಾಂಸವನ್ನು ಬೇಯಿಸುವ ಬಗ್ಗೆ ಮುಸ್ಕಾನ್ ಹಾಗೂ ಅಜಯ್ ನಡುವೆ ತೀವ್ರ ಜಗಳವಾಗಿದೆ. ಚೈತ್ರ ನವರಾತ್ರಿಯ ಶುಭ ದಿನಗಳಲ್ಲಿ ಮಾಂಸಾಹಾರ ಬೇಯಿಸೋದು ಬೇಡ ಎಂದು ಅಜಯ್ ತನ್ನ ಪತ್ನಿಗೆ ಹೇಳಿದ್ದ. ಇದರಿಂದ ಜಗಳ ತಾರಕಕ್ಕೇರಿದೆ.
ಆ ಬಳಿಕ ಅಲಿಗಢ ಪೊಲೀಸರಿಗೆ ನೀಡಿದ ದೂರಿನಲ್ಲಿ ಅಜಯ್ ಕುಮರ್ ಸಿಂಗ್ 'ಪತ್ನಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳದಿದ್ದರೆ ತನ್ನ ಜೀವನ ಕೊನೆಗೊಳಿಸುತ್ತೇನೆ ಎಂದು ಹೇಳಿದ್ದಾಳೆ. ಅಲ್ಲದೆ ತನ್ನ ಮೇಲೆ ಪ್ರಚೋದನೆಯ ಆರೋಪ ಹಾಕುವುದಾಗಿ ಬೆದರಿಕೆ ಹಾಕಿದ್ದಾಳೆ' ಎಂದು ಆರೋಪಿಸಿದ್ದಾರೆ.ಅಜಯ್ ಸಿಂಗ್ ದೂರಿನನ್ವಯ ಮುಸ್ಕಾನ್, ಆಕೆಯ ತಾಯಿ ಶೆಹನ್‌ಶಾ, ತಂದೆ ಯೂನಸ್ ಅಲಿ, ಸಹೋದರ ಫುರ್ಕ್ವಾನ್ ಅಲಿ ಮತ್ತು ಸೋದರಮಾವ ಸುಹೇಲ್ ಖಾನ್ ವಿರುದ್ಧ ಅಲಿಗಢ ಪೊಲೀಸರು ಬುಧವಾರ ಪ್ರಕರಣ ದಾಖಲಿಸಿದ್ದಾರೆ.
'ನಾವು ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ದೂರಿನಲ್ಲಿ ಹೇಳಲಾದ ಆರೋಪಗಳು ನಿಜವೆಂದು ನಾವು ಕಂಡುಕೊಂಡ ಬಳಿಕವೇ ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂದು ಅಲಿಘರ್‌ನ ಬಾರ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿ ಸರ್ಜನಾ ಸಿಂಗ್ ಹೇಳಿದ್ದಾರೆ. ಪೊಲೀಸರ ಪ್ರಕಾರ, ಅಜಯ್ ಕುಮಾರ್ ಸಿಂಗ್ ಮೊದಲು ಕರ್ಣಿಸೇನೆಯ ರಾಷ್ಟ್ರೀಯ ಉಪಾಧ್ಯಕ್ಷ ಜ್ಞಾನೇಂದ್ರ ಸಿಂಗ್ ಚೌಹಾಣ್ ಅವರನ್ನು ಸಂಪರ್ಕಿಸಿದ್ದಾರೆ. ಆ ಬಳಿಕ ಅವರು ಅಜಯ್ ಸಿಂಗ್ ರನ್ನು ಪೊಲೀಸ್ ಅಧಿಕಾರಿ ಸರ್ಜನಾ ಸಿಂಗ್ ಬಳಿಗೆ ಕರೆದೊಯ್ದಿದ್ದಾರೆ.
ಅಲಿಘರ್ ಪೊಲೀಸರು ಸೆಕ್ಷನ್ 295 (ಹಾನಿ ಅಥವಾ ಪೂಜೆ, ಅಥವಾ ಯಾವುದೇ ವರ್ಗದಿಂದ ಪವಿತ್ರವಾದ ಯಾವುದೇ ವಸ್ತು), 295A (ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು), 298 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಉದ್ದೇಶಪೂರ್ವಕ ಉದ್ದೇಶ), 506 ಭಾರತೀಯ ದಂಡ ಸಂಹಿತೆಯ (IPC) ಕ್ರಿಮಿನಲ್ ಬೆದರಿಕೆಯನ್ನು ಆರೋಪಿಗಳ ಮೇಲೆ ಹಾಕಲಾಗಿದೆ ಸರ್ಜನಾ ಸಿಂಗ್ ತಿಳಿಸಿದರು.
ದಂಪತಿಯನ್ನು ನಾವು ಠಾಣೆಗೆ ಕರೆದಿದ್ದೇವೆ. ಅವರ ನಡುವಿನ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಲು ಪ್ರಯತ್ನಿಸುತ್ತೇವೆ. ಪತ್ನಿ ಮತ್ತು ಆಕೆಯ ಕುಟುಂಬ ಸದಸ್ಯರು ಮತಾಂತರಗೊಳ್ಳುವಂತೆ ಅಜಯ್ ಸಿಂಗ್ ಮೇಲೆ ಒತ್ತಡ ಹೇರುವುದನ್ನು ಮುಂದುವರಿಸಿದರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಉಪ ಎಸ್ಪಿ ಸರ್ಜನಾ ಸಿಂಗ್ ಹೇಳಿದ್ದಾರೆ.
ಡಿಸೆಂಬರ್‌ನಲ್ಲಿ ದಂಪತಿ ವಿವಾಹವಾದ ಬಳಿಕ, ಮುಸ್ಕಾನ್ ಕುಟುಂಬವು ಅಜಯ್‌ಕುಮಾರ್ ಸಿಂಗ್ ವಿರುದ್ಧ ಅಕ್ಷರಾಬಾದ್ ಪೊಲೀಸ್ ಠಾಣೆಯಲ್ಲಿ ಅಪಹರಣ ಮತ್ತು ಬಲವಂತದ ಮದುವೆ ಪ್ರಕರಣವನ್ನು ದಾಖಲಿಸಿತ್ತು. ಆದರೆ ಮುಸ್ಕಾನ್ ತನ್ನ ಸ್ವಂತ ಇಚ್ಛೆಯ ಮೇರೆಗೆ ಆತನನ್ನು ವಿವಾಹವಾಗಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾಳೆ. ಆದ್ದರಿಂದ ನ್ಯಾಯಾಲಯ ಪ್ರಕರಣವನ್ನು ವಜಾಗೊಳಿಸಿತ್ತು.