ನಾಲ್ಕು ವರ್ಷಗಳಿಂದ ಕಳವಾಗಿರುವ ಚಿನ್ನದ ಸರ ಪತ್ತೆಮಾಡಲಾಗದ ಪೊಲೀಸರು ವಾರಸುದಾರೆಗೆ ಹೊಸ ಸರ ಕೊಡಿಸಿದ್ರು...! - ಆಗಿದ್ದೇನು ಗೊತ್ತೇ...?
Monday, April 3, 2023
ಕೊಚ್ಚಿ: ಕಳವಾಗಿರುವ ಚಿನ್ನಾಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸುವುದು ಪೊಲೀಸ್ ಠಾಣೆಗಳಲ್ಲಿ ನಡೆಯುವ ಸರ್ವೇಸಾಮಾನ್ಯ ಪ್ರಕ್ರಿಯೆ. ಆದರೆ ಕಳವಾಗಿರುವ ಚಿನ್ನದ ಸರವನ್ನು ನಾಲ್ಕು ವರ್ಷಗಳಿಂದ ಪತ್ತೆ ಹಚ್ಚಲಾಗದ ಪೊಲೀಸರು ಇದೀಗ ಹೊಸ ಚಿನ್ನದ ಸರವನ್ನೇ ಖರೀದಿಸಿ ವಾರಸುದಾರೆಗೆ ಹಸ್ತಾಂತರಿಸಿದ ಅಪರೂಪದ ಪ್ರಸಂಗವೊಂದು ಕೇರಳದಲ್ಲಿ ನಡೆದಿದೆ.
ಕೇರಳದ ಒಟ್ಟಪ್ಪಲಂ ಪೊಲೀಸ್ ಠಾಣೆಗೆ 2019ರ ಫೆಬ್ರವರಿಯಲ್ಲಿ ಪಝಂಬಲಕ್ಕೋಡ್ ನಿವಾಸಿ ವೃದ್ಧೆ ಚಿನ್ನದ ಸರ ಕಳವು ಬಗ್ಗೆ ದೂರು ನೀಡಿದ್ದರು. ಈಕೆ ಒಟ್ಟಪ್ಪಲಂ ತಾಲೂಕು ಆಸ್ಪತ್ರೆಗೆ ಎಕ್ಸ್‌ರೇ ತೆಗೆಯಲು ಹೋದಾಗ ಈ ಸರ ಕಳುವಾಗಿತ್ತು. ಎಕ್ಸ್ ರೇ ತೆಗೆಯುವುದಕ್ಕಿಂತ ಮೊದಲು ಸರ ತೆಗೆದಿಡಲು ಹೇಳಿದ್ದರು. ಆದ್ದರಿಂದ ಆಕೆ ಸರವನ್ನು ಪರ್ಸ್‌ನಲ್ಲಿಟ್ಟು ಒಂದು ಕಡೆ ಇರಿಸಿದ್ದರು. ಆದರೆ ಎಕ್ಸ್ ರೇ ತೆಗೆಸಿ ಬರುವಷ್ಟರಲ್ಲಿ ಪರ್ಸ್ ನಾಪತ್ತೆಯಾಗಿತ್ತು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದರು. ಇದು ತನ್ನ ಮದುವೆ ಸಂದರ್ಭದಲ್ಲಿ ಪತಿ ಉಡುಗೊರೆಯಾಗಿ ಕೊಟ್ಟಿದ್ದ ಸರ ಎಂದು ಮಹಿಳೆ ಹೇಳಿದ್ದರು.
ಮಹಿಳೆ ನೀಡಿರುವ ದೂರಿನನ್ವಯ ಎಕ್ಸ್‌ರೇ ಕೇಂದ್ರಕ್ಕೆ ಹೋಗಿ ಪರಿಶೀಲನೆ ನಡೆಸಿ ವಿಚಾರಿಸಿದ ಪೊಲೀಸರಿಗೆ ಯಾವ ಸುಳಿವೂ ದೊರಕಿರಲಿಲ್ಲ. ಅಲ್ಲದೆ ಆ ಆಸ್ಪತ್ರೆಯಲ್ಲಿ ಸಿಸಿಟಿವಿ ಕ್ಯಾಮರಾ ಇಲ್ಲದಿರುವುದು ಕೂಡ ಹಿನ್ನಡೆಯಾಗಿತ್ತು. ಆದರೂ ಮಹಿಳೆ ಆಗಾಗ ಠಾಣೆಗೆ ಬಂದು 'ಸರ ಪತ್ತೆಯಾಯಿತೇ...?' ಎಂದು ವಿಚಾರಿಸುತ್ತಿದ್ದರು.
2020ರ ಸೆಪ್ಟೆಂಬರ್‌ನಲ್ಲಿ ಗೋವಿಂದಪ್ರಸಾದ್ ಎಂಬ ಎಸ್‌ಐ ಒಟ್ಟಪ್ಪಲಂ ಠಾಣೆಗೆ ವರ್ಗವಾಗಿ ಬಂದಿದ್ದರು. ಆದ್ದರಿಂದ ಮಹಿಳೆಯ ಪ್ರಕರಣದ ತನಿಖೆ ಅವರ ಕೈಗೆ ತಲುಪಿತ್ತು. ಅವರು ಸಾಕಷ್ಟು ಪ್ರಯತ್ನ ಮಾಡಿದರೂ ಸರ ಮಾತ್ರ ಪತ್ತೆ ಆಗಿರಲಿಲ್ಲ.
ಮಹಿಳೆ ಸರ ಇಟ್ಟಿದ್ದ ಪರ್ಸ್ ಎಲ್ಲಿರಿಸಿದ್ದೆ ಎಂದು ಸ್ಪಷ್ಟವಾಗಿ ಹೇಳಿಲ್ಲ. ಅಲ್ಲದೆ ಸರ ಕಳವಾಗಿರುವುದಕ್ಕೂ ಸರಿಯಾದ ಆಧಾರವಿಲ್ಲ ಎಂದು ಪೊಲೀಸರು ತಿಳಿಸಿದ್ದು, ಬಳಿಕ ಈ ಮಹಿಳೆ ಎಸ್‌ಪಿ ಹಾಗೂ ಜಿಲ್ಲಾಧಿಕಾರಿಗೂ ದೂರು ನೀಡಿದ್ದರು. ಮಾತ್ರವಲ್ಲದೆ, ಮಾ. 31ರಂದು ಮತ್ತೆ ಠಾಣೆಗೆ ಬಂದು ವಿಚಾರಿಸಿದ್ದರು. ಮಹಿಳೆಯ ಪರಿಸ್ಥಿತಿಯನ್ನು ಕಂಡು ಮರುಗಿದ ಗೋವಿಂದಪ್ರಸಾದ್, ಈ ಕುರಿತು ಸರ್ಕಲ್ ಇನ್‌ಸ್ಪೆಕ್ಟರ್ ಸುಜಿತ್ ಬಳಿ ಚರ್ಚಿಸುತ್ತಾರೆ. ಅವರು ಹೊಸದೊಂದು ಸರ ಖರೀದಿಸಿ ಕೊಡುವ ಐಡಿಯಾ ನೀಡಿದ್ದಾರೆ. ಬಳಿಕ ಠಾಣೆಯ ಎಲ್ಲಾ ಸಿಬ್ಬಂದಿ ಹಣ ಹಾಕಿ ಹೊಸದೊಂದು ಸರ ಖರೀದಿಸಿ, ಗೋವಿಂದಪ್ರಸಾದ್ ನಿವೃತ್ತಿ ದಿನವೇ ಆ ಮಹಿಳೆಗೆ ಹಸ್ತಾಂತರಿಸಲಾಗಿದೆ.