ಮಂಗಳೂರು: ಸಿಎಂ ಬೊಮ್ಮಾಯಿ ಕಟೀಲು ದೇವಸ್ಥಾನ ಭೇಟಿ
Thursday, April 13, 2023
ಮಂಗಳೂರು: ಕರಾವಳಿ ಪ್ರವಾಸದಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿಯವರು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಪತ್ನಿ ಸಹಿತ ಭೇಟಿ ನೀಡಿ ಶ್ರೀದೇವಿಯ ದರ್ಶನ ಪಡೆದರು.
ಬೆಳಗ್ಗೆ ಕೊಲ್ಲೂರು ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದರು. ಬಳಿಕ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಮಂಗಳೂರಿನ ಮೇರಿಹಿಲ್ ಹೆಲಿಪ್ಯಾಡ್ ನಲ್ಲಿ ಬಂದಿಳಿದ ಸಿಎಂ ರಸ್ತೆ ಮಾರ್ಗದ ಮೂಲಕ ಮಂಗಳೂರು ತಾಲೂಕಿನ ಕಟೀಲು ದೇವಸ್ಥಾನಕ್ಕೆ ಆಗಮಿಸಿದರು.
ದೇವಸ್ಥಾನದ ವತಿಯಿಂದ ಬಸವರಾಜ ಬೊಮ್ಮಾಯಿ ದಂಪತಿಗೆ ಸ್ವಾಗತ ಕೋರಲಾಯಿತು. ಬಳಿಕ ಕಟೀಲು ದುರ್ಗಾಪರಮೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಅವರು ಶ್ರೀದೇವಿಯ ದರ್ಶನ ಪಡೆದರು. ಪ್ರಾರ್ಥನೆ ಮಾಡಿ ಪ್ರಸಾದ ನೀಡಿ ಆಶೀರ್ವದಿಸಿದ ಆಸ್ರಣ್ಣರು ಮಲ್ಲಿಗೆ ಹಾರ, ಶಾಲು ಹೊದಿಸಿ ಗೌರವ ಸಲ್ಲಿಸಿದರು. ಬಳಿಕ ದೇವಸ್ಥಾನದಲ್ಲೇ ಅನ್ನಪ್ರಸಾದ ಬೊಮ್ಮಾಯಿ ದಂಪತಿ ಸ್ವೀಕರಿಸಿದರು. ಈ ವೇಳೆ ಮೂಡಬಿದಿರೆ ಕ್ಷೇತ್ರದ ಅಭ್ಯರ್ಥಿ ಉಮಾನಾಥ್ ಕೋಟ್ಯಾನ್ ಜೊತೆಗಿದ್ದರು.
ಈ ವೇಳೆ ಲಕ್ಷ್ಮಣ ಸವದಿ ರಾಜೀನಾಮೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿಯವರು, ನಾವೆಲ್ಲಾ ಪ್ರಯತ್ನ ಮಾಡಿದ್ದೇವೆ. ಅವರು ಬಹಳ ಸೀನಿಯರ್ ಲೀಡರ್ ಇದ್ದಾರೆ. ಬಹಳ ನೋವಾಗುತ್ತದೆ, ಅವರು ದುಡುಕುವಂತಹ ಅವಶ್ಯಕತೆಯಿಲ್ಲ. ಜೀವನದಲ್ಲಿ ಇಂತಹ ಘಟನೆಗಳು ಬಂದೇ ಬರುತ್ತದೆ. ನಾವು ಸ್ವಲ್ಪ ಸಂಯಮದಿಂದ ದುಡುಕದೆ ನಿರ್ಧಾರಕ್ಕೆ ಬರಬೇಕು. ಈ ಪಾರ್ಟಿಯಲ್ಲಿ ಒಳ್ಳೆ ಭವಿಷ್ಯವಿದೆ ಎಂದು ಹೇಳಲು ಬಯಸುತ್ತೇನೆ ಎಂದು ಹೇಳಿದರು.