ಬಿ.ವಿ.ಶ್ರೀನಿವಾಸ್ ವಿರುದ್ಧ ಗಂಭೀರ ಆರೋಪ ಮಾಡಿದ ಯುವ ಕಾಂಗ್ರೆಸ್ ಮುಖಂಡೆ
Tuesday, April 18, 2023
ಗುವಾಹಟಿ: ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಮೇಲೆ ಕಾಂಗ್ರೆಸ್ ಪಕ್ಷದ ಯುವ ಘಟಕದ ಮಹಿಳಾ ಕಾರ್ಯಕರ್ತೆ ಕಿರುಕುಳದ ಗಂಭೀರ ಆರೋಪ ಹೊರಿಸಿದ್ದಾರೆ. ಇದೀಗ ಈ ಸುದ್ದಿ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಯುವ ಕಾಂಗ್ರೆಸ್ ಅಸ್ಸಾಂ ಘಟಕದ ಅಧ್ಯಕ್ಷೆ ಅಂಕಿತಾ ದತ್ತಾ ಈ ಗಂಭೀರ ಆರೋಪ ಮಾಡಿದವರು. 'ಶ್ರೀನಿವಾಸ್ ಹಲವಾರು ತಿಂಗಳುಗಳಿಂದ ತನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಅವರೊಬ್ಬ ಮಹಿಳಾ ವಿರೋಧಿ, ಪ್ರತಿಯೊಂದು ಕೆಲಸದಲ್ಲೂ ಲಿಂಗ ತಾರತಮ್ಯ ಮಾಡುತ್ತಿದ್ದಾರೆ. ಮಹಿಳೆ ಎಂಬುದನ್ನೂ ಪರಿಗಣಿಸದೆ ತನಗೆ ನಿರಂತರ ಕಿರುಕುಳ ನೀಡುತ್ತಿದ್ದಾರೆ. ಈ ಕುರಿತು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಪಕ್ಷದ ನಾಯಕರೆಲ್ಲರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನೇರ ಆರೋಪ ಮಾಡಿದ್ದಾರೆ.
ಈ ಕುರಿತು ಸರಣಿ ಟ್ವಿಟ್ ಮಾಡಿರುವ ಅಂಕಿತಾ ದತ್ತಾ “ಲಡಕಿ ಹೂ ಲಡ್ ಸಕ್ತಿ ಹೂ" (ಮಹಿಳೆಯಿದ್ದೇನೆ, ಹೋರಾಡಬಲ್ಲೆ) ಎಂದು ಹೇಳುವ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ತನ್ನ ವಿಚಾರದಲ್ಲಿ ಮೌನವಾಗಿದ್ದಾರೆ. ಶ್ರೀನಿವಾಸ್ ತನಗಿರುವ ಉನ್ನತ ನಾಯಕರ ನಿಕಟ ಸಂಪರ್ಕವನ್ನು ಬಳಸಿ ನನ್ನನ್ನು ತುಳಿಯಲೆತ್ನಿಸುತ್ತಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ನಡೆದ ಭಾರತ್ ಜೋಡೋ ಸಮಾರೋಪ ಸಮಾರಂಭದ ಸಂದರ್ಭದಲ್ಲಿಯೇ ರಾಹುಲ್ ಗಾಂಧಿ ಅವರಿಗೆ ಶ್ರೀನಿವಾಸ್ ಕಿರುಕುಳದ ಕುರಿತು ವಿವರ ನೀಡಿದ್ದೆ. ಆದರೆ ಈವರೆಗೂ ರಾಹುಲ್ ಗಾಂಧಿ ಆತನ ವಿರುದ್ಧ ವಿಚಾರಣೆ ನಡೆಸುವ ಗೋಜಿಗೂ ಹೋಗಿಲ್ಲ ಎಂದು ವಿವರಿಸಿದ್ದಾರೆ.
'ನಾನು ಸದ್ಯದಲ್ಲೇ ಕಾಂಗ್ರೆಸ್ ತ್ಯಜಿಸುತ್ತೇನೆ, ಬಿಜೆಪಿ ಸೇರುತ್ತೇನೆ' ಎಂಬ ಅರ್ಥ ಬರುವಂತೆ ನನ್ನ ವಿರುದ್ಧ ಪೋಸ್ಟರ್‌ಗಳನ್ನು ಮಾಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವಂತೆ ಶ್ರೀನಿವಾಸ್ ನೋಡಿಕೊಳ್ಳುತ್ತಿದ್ದಾನೆ. ನಾಲ್ಕು ಪೀಳಿಗೆಯಿಂದಲೂ ನಮ್ಮದು ಕಾಂಗ್ರೆಸ್ ಕುಟುಂಬ. ಹಲವು ವರ್ಷಗಳಿಂದ ಕಾಂಗ್ರೆಸ್ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನಂಥವರಿಗೇ ಈ ವ್ಯಕ್ತಿ ಇಂತಹ ಕಿರುಕುಳ ನೀಡಬೇಕೆಂದರೆ ಇನ್ನು ಯುವ ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕರ್ತೆಯರಿಗೆ ಇನ್ನೆಂಥ ಕಿರುಕುಳ ಆಗುತ್ತಿರಬಾರದು?” ಎಂದು ಅಂಕಿತಾ ದತ್ತಾ ಪ್ರಶ್ನಿಸಿದ್ದಾರೆ.